ADVERTISEMENT

ಹಣಕಾಸು: ಹೆಚ್ಚುತ್ತಿದೆ ಎನ್‌ಪಿಎಸ್, ಎಪಿವೈ ಚಂದಾದಾರರ ಸಂಖ್ಯೆ

ಗಂಜಿ ಆದಿಶೇಷ
Published 3 ಡಿಸೆಂಬರ್ 2025, 23:30 IST
Last Updated 3 ಡಿಸೆಂಬರ್ 2025, 23:30 IST
   

2004ರ ಜನವರಿ 1ರಂದು ಪ್ರಾರಂಭವಾದ ರಾಷ್ಟ್ರೀಯ ಪಿಂಚಣಿ ಯೋಜನೆಯು (ಎನ್‌ಪಿಎಸ್‌), ಕೇಂದ್ರ ಸರ್ಕಾರದ ದೀರ್ಘಾವಧಿ ನಿವೃತ್ತಿ ಉಳಿತಾಯ ಯೋಜನೆ. ಈ ಯೋಜನೆಯು ವ್ಯಕ್ತಿಗಳಿಗೆ ನಿವೃತ್ತಿ ನಂತರದ ಆರ್ಥಿಕ ಭದ್ರತೆ ಒದಗಿಸಲು ರೂಪುಗೊಂಡಿದೆ.

ಆರಂಭದಲ್ಲಿ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿದ್ದ ಈ ಯೋಜನೆ ಬಳಿಕ ಎಲ್ಲ ವರ್ಗದ ಜನರಿಗೂ ದೊರೆಯಿತು. 18ರಿಂದ 70ರ ವಯೋಮಾನದ ಎಲ್ಲರೂ ಇದಕ್ಕೆ ಅರ್ಹರು.

2013-14ರಲ್ಲಿ ಎನ್‌ಪಿಎಸ್‌ನಲ್ಲಿ 65,06,180 ಚಂದಾದಾರರು ಇದ್ದರು. ಇದು 2025–26ರ ಅಕ್ಟೋಬರ್ 31ರ ವೇಳೆಗೆ 2,09,46,910ಕ್ಕೆ ಏರಿಕೆಯಾಗಿದೆ. ಇವರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು, ಎನ್‌ಪಿಎಸ್ ವಾತ್ಸಲ್ಯ, ಎನ್‌ಪಿಎಸ್ ಸ್ವಾವಲಂಬನ್, ಕಾರ್ಪೊರೇಟ್ ವಲಯ, ಎಲ್ಲ ನಾಗರಿಕರು ಇದ್ದಾರೆ. ಈ ಹೂಡಿಕೆದಾರರು ತೊಡಗಿಸಿದ ಮೊತ್ತ ₹15.70 ಲಕ್ಷ ಕೋಟಿ ದಾಟಿದೆ.

ADVERTISEMENT

2013–14ರಲ್ಲಿ ಕಾರ್ಪೊರೇಟ್‌ ವಲಯದ ಚಂದಾದಾರರ ಸಂಖ್ಯೆ 2,62,335 ಇತ್ತು. ಇದು ಪ್ರಸಕ್ತ ವರ್ಷದ ಅಕ್ಟೋಬರ್ ಅಂತ್ಯದ ವೇಳೆಗೆ 25,53,708ಕ್ಕೆ ಏರಿಕೆ ಆಗಿದೆ. ಇದೇ ಅವಧಿಯಲ್ಲಿ ಹೂಡಿಕೆ ಮೊತ್ತವು ₹2,627 ಕೋಟಿಯಿಂದ ₹2,58,079 ಕೋಟಿಗೆ ಹೆಚ್ಚಳವಾಗಿದೆ. ಈ ಅಂಕಿ–ಅಂಶಗಳು ಕಾರ್ಪೊರೇಟ್‌ ವಲಯದ ನೌಕರರು ಸಾಮಾಜಿಕ ಭದ್ರತಾ ಯೋಜನೆಗೆ ನೀಡುತ್ತಿರುವ ಪ್ರಾಮುಖ್ಯವನ್ನು ತೋರಿಸುತ್ತಿದೆ.

2024ರ ಸೆಪ್ಟೆಂಬರ್‌ 18ರಂದು ಎನ್‌ಪಿಎಸ್‌ ವಾತ್ಸಲ್ಯ ಯೋಜನೆಗೆ ಚಾಲನೆ ನೀಡಲಾಯಿತು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಪೋಷಕರು ಎನ್‌ಪಿಎಸ್‌–ವಾತ್ಸಲ್ಯ ಖಾತೆ ತೆರೆಯಬಹುದಾಗಿದೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಆರ್ಥಿಕ ಭದ್ರತೆ ಒದಗಿಸಲು ಈ ಯೋಜನೆ ಸಹಕಾರಿಯಾಗಿದೆ.

2024–25ರಲ್ಲಿ ಈ ಯೋಜನೆಯಡಿ ಒಟ್ಟು 1,07,523 ಚಿಣ್ಣರು ಚಂದಾದಾರಿಕೆ ಪಡೆದಿದ್ದಾರೆ. ಇವರ ಹೂಡಿಕೆ ಮೊತ್ತ ₹92 ಕೋಟಿ. ಪ್ರಸಕ್ತ ಆರ್ಥಿಕ ವರ್ಷದ ಅಕ್ಟೋಬರ್ ಅಂತ್ಯದ ವೇಳೆಗೆ ಹೂಡಿಕೆದಾರರು 1,47,287 ಆಗಿದ್ದು, ಮೊತ್ತವು ₹202 ಕೋಟಿಗೆ ಹೆಚ್ಚಳವಾಗಿದೆ.

2024ರ ಸೆಪ್ಟೆಂಬರ್ 18ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎನ್‌ಪಿಎಸ್ ವಾತ್ಸಲ್ಯ ಯೋಜನೆಗೆ ಚಾಲನೆ ನೀಡಿದರು

ಅಟಲ್‌ ಪಿಂಚಣಿ ಯೋಜನೆಯಲ್ಲಿ 8.34 ಕೋಟಿ ಚಂದಾದಾರರು:

ದೇಶದ ಎಲ್ಲ ನಾಗರಿಕರಿಗೆ, ವಿಶೇಷವಾಗಿ ಬಡವರು, ಸೌಲಭ್ಯ ವಂಚಿತರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಒದಗಿಸುವ ಗುರಿಯೊಂದಿಗೆ ಅಟಲ್ ಪಿಂಚಣಿ ಯೋಜನೆ (ಎಪಿವೈ) ಅನ್ನು 2015ರಲ್ಲಿ ಕೇಂದ್ರ ಸರ್ಕಾರ ಪ್ರಾರಂಭಿಸಿತು. ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವ 18ರಿಂದ 40 ವರ್ಷ ವಯಸ್ಸಿನ ಎಲ್ಲಾ ನಾಗರಿಕರು ಈ ಯೋಜನೆಗೆ ಅರ್ಹರು.

ಈ ಯೋಜನೆಯ ಅಡಿ ನೋಂದಾಯಿಸಿಕೊಂಡವರು ಕಟ್ಟುವ ಮೊತ್ತಕ್ಕೆ ಅನುಗುಣವಾಗಿ ಮಾಸಿಕ
₹1 ಸಾವಿರದಿಂದ ₹5 ಸಾವಿರವರೆಗೆ ಪಿಂಚಣಿ ಸಿಗುತ್ತದೆ. ಆದಾಯ ತೆರಿಗೆ ಪಾವತಿಸುವವರಿಗೆ ಈ ಯೋಜನೆ ಅನ್ವಯಿಸುವುದಿಲ್ಲ. ಪಿಂಚಣಿ ಮೊತ್ತವು 60 ವರ್ಷ ವಯಸ್ಸಾದ ನಂತರ ಸಿಗುತ್ತದೆ.

ಅಕ್ಟೋಬರ್ ಅಂತ್ಯದ ವೇಳೆಗೆ ಈ ಯೋಜನೆಯಲ್ಲಿ ಒಟ್ಟು 8,34,13,738 ಜನರು ನೋಂದಣಿ ಆಗಿದ್ದಾರೆ. ಈ ಪೈಕಿ ಮಹಿಳೆಯರ ಪ್ರಮಾಣ 4,04,41,135. ಇದು ಒಟ್ಟು ನೋಂದಣಿ ಪೈಕಿ ಶೇ 48ರಷ್ಟು.

(ಎನ್‌ಪಿಎಸ್‌ ವೆಬ್‌ಸೈಟ್‌, ಸಂಸತ್ತಿಗೆ ಕೇಂದ್ರ ಹಣಕಾಸು ಸಚಿವಾಲಯ ನೀಡಿರುವ ಮಾಹಿತಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.