ADVERTISEMENT

ತೈಲ ಬಿಕ್ಕಟ್ಟು: ಸೋಮವಾರ ಒಪೆಕ್‌ ಸಂಘಟನೆಯ ಸಭೆ

ಏಜೆನ್ಸೀಸ್
Published 3 ಏಪ್ರಿಲ್ 2020, 19:30 IST
Last Updated 3 ಏಪ್ರಿಲ್ 2020, 19:30 IST
   

ವಿಯೆನ್ನಾ: ತೈಲ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸೌದಿ ಅರೇಬಿಯಾ ನೇತೃತ್ವದಲ್ಲಿನ ಕಚ್ಚಾ ತೈಲ ರಫ್ತು ದೇಶಗಳ ಸಂಘಟನೆ (ಒಪೆಕ್‌) ಮತ್ತು ಅದರ ಮಿತ್ರ ದೇಶಗಳು ಸೋಮವಾರ ವಿಡಿಯೊ ಕಾನ್‌ಫೆರೆನ್ಸ್‌ ಮೂಲಕ ತುರ್ತು ಸಭೆ ನಡೆಸಲಿವೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯುಎರಡು ಮೂರಾಂಶದಷ್ಟು ಕುಸಿದಿರುವುದಕ್ಕೆ ಕಡಿವಾಣ ಹಾಕುವ ಕುರಿತು ಚರ್ಚಿಸಲು ಈ ಸಭೆ ಆಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತೈಲ ಬೆಲೆ ಮಾರುಕಟ್ಟೆಯಲ್ಲಿ ಸ್ಥಿರತೆ ತರಲು ‘ಒಪೆಕ್’ ಮತ್ತು ಅದರ ಪಾಲುದಾರ ದೇಶಗಳು ಸಭೆ ಸೇರಿ ಚರ್ಚೆ ನಡೆಸಬೇಕು ಎಂದು ಗುರುವಾರ ನಡೆದ ಅಚ್ಚರಿಯ ಬೆಳವಣಿಗೆಯೊಂದರಲ್ಲಿಸೌದಿ ಅರೇಬಿಯಾ ಕರೆ ನೀಡಿತ್ತು. ತೈಲ ಉತ್ಪಾದಿಸುವ ದೇಶಗಳು ಸಭೆ ಸೇರಲಿರುವ ಸುದ್ದಿ ಖಚಿತವಾಗುತ್ತಿದ್ದಂತೆ ಬ್ರೆಂಟ್‌ ಕಚ್ಚಾ ತೈಲದ ಬೆಲೆ ಶೇ 10ರಷ್ಟು ಏರಿಕೆ ಕಂಡಿತು.

ADVERTISEMENT

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಸೌದಿ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಮಧ್ಯೆ ದೂರವಾಣಿ ಸಂಭಾಷಣೆ ನಡೆದ ಬೆನ್ನಲ್ಲೇ ಈ ಸಭೆ ಕರೆಯಲಾಗಿದೆ. ಯಾವ, ಯಾವ ದೇಶಗಳು ಸಭೆಯಲ್ಲಿ ಭಾಗವಹಿಸಲಿವೆ ಎನ್ನುವುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ರಷ್ಯಾದ ಮೂಲಗಳ ಪ್ರಕಾರ, ಸಭೆಯಲ್ಲಿ ಭಾಗವಹಿಸಲು ಅಮೆರಿಕದ ಅಧಿಕಾರಿಗಳಿಗೂ ಆಹ್ವಾನ ನೀಡಲಾಗಿದೆ.

ಉತ್ಪಾದನೆ ತಗ್ಗಿಸುವ ನಿರ್ಧಾರ?:ಸಭೆಯಲ್ಲಿ ಸಹಕಾರದ ಹೊಸ ಘೋಷಣೆ ಅಂಗೀಕರಿಸುವ ಮತ್ತು ತೈಲ ಉತ್ಪಾದನೆ ಪ್ರಮಾಣವನ್ನು ಪ್ರತಿ ದಿನಕ್ಕೆ 1 ಕೋಟಿ ಬ್ಯಾರಲ್‌ ತೈಲ ಉತ್ಪಾದನೆ ತಗ್ಗಿಸುವ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.

ಕಚ್ಚಾ ತೈಲ ಉತ್ಪಾದನೆ ಕಡಿತಗೊಳಿಸುವ ಸಂಬಂಧ ಕಳೆದ ತಿಂಗಳು ‘ಒಪೆಕ್‌‘ ಮತ್ತು ಅದರ ಮಿತ್ರ ದೇಶಗಳು ಸಹಮತಕ್ಕೆ ಬರುವಲ್ಲಿ ವಿಫಲಗೊಂಡಿದ್ದವು. ‘ಕೊರೊನಾ–2’ ವೈರಸ್‌ ಹಾವಳಿಯ ಕಾರಣಕ್ಕೆ ತೈಲಕ್ಕೆ ಬೇಡಿಕೆ ಕುಸಿದಿದೆ. ಈ ಕಾರಣಕ್ಕೆ ಉತ್ಪಾದನೆ ಮತ್ತು ಪೂರೈಕೆ ತಗ್ಗಿಸುವ ಸಲಹೆ ಪಾಲಿಸಲು ರಷ್ಯಾ ನಿರಾಕರಿಸಿತ್ತು ಎಂದು ಸೌದಿ ಅರೇಬಿಯಾ ಆರೋಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.