ADVERTISEMENT

ಕಚ್ಚಾ ತೈಲದ ಬೆಲೆ ಇಳಿಕೆ: ಪೆಟ್ರೋಲ್, ಡೀಸೆಲ್ ದರ ಬದಲಾವಣೆ ಇಲ್ಲ

ಪಿಟಿಐ
Published 11 ಸೆಪ್ಟೆಂಬರ್ 2022, 14:23 IST
Last Updated 11 ಸೆಪ್ಟೆಂಬರ್ 2022, 14:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಏಳು ತಿಂಗಳ ಕನಿಷ್ಠ ಮಟ್ಟ ತಲುಪಿದೆ. ಆದರೆ, ದೇಶಿ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ವೆಚ್ಚ ಹೆಚ್ಚಾಗಿದ್ದರೂ ತೈಲ ಬೆಲೆ ಏರಿಕೆ ಮಾಡದಿದ್ದ ಕಾರಣದಿಂದಾಗಿ ಆದ ನಷ್ಟವನ್ನು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಈಗ ಸರಿದೂಗಿಸಿಕೊಳ್ಳುತ್ತಿವೆ.

ಬ್ರೆಂಟ್ ಕಚ್ಚಾ ತೈಲದ ದರವು ಹಿಂದಿನ ವಾರ ಬ್ಯಾರೆಲ್‌ಗೆ 90 ಡಾಲರ್‌ಗಿಂತ ಕಡಿಮೆ ಮಟ್ಟಕ್ಕೆ ಕುಸಿಯಿತು. ಇದು ಫೆಬ್ರುವರಿ ಆರಂಭದಲ್ಲಿದ್ದ ದರಕ್ಕಿಂತ ಕಡಿಮೆ. ಅದಾದ ನಂತರದಲ್ಲಿ ತುಸು ಚೇತರಿಕೆ ಕಂಡ ದರವು ಈಗ 92.84 ಡಾಲರ್‌ನಷ್ಟಿದೆ.

ಹೀಗಿದ್ದರೂ, ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. 158 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರವಾಗಿದೆ.

ADVERTISEMENT

ದರ ಬದಲಾವಣೆ ಮಾಡದಿರುವುದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ಕೇಂದ್ರ ಇಂಧನ ಸಚಿವ ಹರದೀಪ್ ಸಿಂಗ್ ಪುರಿ ಅವರು ಶುಕ್ರವಾರ, ಕಚ್ಚಾ ತೈಲ ದರವು ಹಲವು ವರ್ಷಗಳ ಗರಿಷ್ಠ ಮಟ್ಟ ತಲುಪಿದ್ದಾಗಲೂ ದೇಶದಲ್ಲಿ ಬೆಲೆ ಏರಿಕೆ ಮಾಡದಿದ್ದುದನ್ನು ಉಲ್ಲೇಖಿಸಿದ್ದರು. ಆದರೆ, ಏಪ್ರಿಲ್‌ 6ರ ನಂತರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಬದಲಾವಣೆ ಮಾಡದಿದ್ದುದರಿಂದ ಆದ ನಷ್ಟ ಎಷ್ಟೆಂಬುದನ್ನು ಅವರು ವಿವರಿಸಲಿಲ್ಲ.

ಭಾರತವು ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಸರಾಸರಿ ಬೆಲೆಯು ಸೆಪ್ಟೆಂಬರ್‌ 8ಕ್ಕೆ 88 ಡಾಲರ್ ಆಗಿತ್ತು. ಸರಾಸರಿ ಬೆಲೆಯು ಏಪ್ರಿಲ್‌ನಲ್ಲಿ 102.97 ಡಾಲರ್, ಮೇ ತಿಂಗಳಲ್ಲಿ 109.51 ಡಾಲರ್, ಜೂನ್‌ನಲ್ಲಿ 116.01 ಡಾಲರ್ ಆಗಿತ್ತು. ಜುಲೈನಲ್ಲಿ ಬೆಲೆ ಇಳಿಕೆ (ಸರಾಸರಿ 105.49 ಡಾಲರ್) ಶುರುವಾಯಿತು. ಆಗಸ್ಟ್‌ನಲ್ಲಿ 97.40 ಡಾಲರ್ ಹಾಗೂ ಸೆಪ್ಟೆಂಬರ್‌ನಲ್ಲಿ ಇದುವರೆಗೆ 92.87 ಡಾಲರ್ ಆಗಿದೆ.

ಹಣದುಬ್ಬರ ನಿಯಂತ್ರಿಸಲು ಸರ್ಕಾರಕ್ಕೆ ನೆರವಾಗುವ ಉದ್ದೇಶದಿಂದ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕಚ್ಚಾ ತೈಲದ ಬೆಲೆಗೆ ಅನುಗುಣವಾಗಿ ಐದು ತಿಂಗಳಿಗೂ ಹೆಚ್ಚು ಅವಧಿಯಿಂದ ಬದಲಾಯಿಸಿಲ್ಲ.

‘ಈಗ ಪೆಟ್ರೋಲ್ ಮಾರಾಟದಿಂದ ನಷ್ಟ ಆಗುತ್ತಿಲ್ಲ. ಡೀಸೆಲ್‌ ಮಾರಾಟದಿಂದ ನಷ್ಟವಿಲ್ಲದ ಸ್ಥಿತಿ ತಲುಪಲು ತುಸು ಸಮಯ ಬೇಕು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಐದು ತಿಂಗಳಿಂದ ಆಗಿರುವ ನಷ್ಟವನ್ನು ಸರಿದೂಗಿಸಿಕೊಳ್ಳಲು ಕಂಪನಿಗಳಿಗೆ ಅವಕಾಶ ಮಾಡಿಕೊಡುವ ಕಾರಣ, ತಕ್ಷಣಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಲಿಕ್ಕಿಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.