ADVERTISEMENT

ನವೋದ್ಯಮ: ಬಂಡವಾಳ ಸಂಗ್ರಹ ಇನ್ನಷ್ಟು ಕಠಿಣ?

ಬಡ್ಡಿದರ ಹೆಚ್ಚಳ, ಹಣದುಬ್ಬರದ ಪರಿಣಾಮ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2023, 23:30 IST
Last Updated 19 ಏಪ್ರಿಲ್ 2023, 23:30 IST
   

ಮುಂಬೈ: ಮಾರುಕಟ್ಟೆ ಮೌಲ್ಯ ಗರಿಷ್ಠ ಮಟ್ಟದಲ್ಲಿ ಇರುವುದು ಹಾಗೂ ಜನರ ಖರೀದಿ ಸಾಮರ್ಥ್ಯವು ಹೆಚ್ಚಾಗದೇ ಇರುವುದು ಹೂಡಿಕೆದಾರರ ಮೇಲೆ ಪರಿಣಾಮ ಬೀರಿದ್ದು, ಭಾರತದ ನವೋದ್ಯಮಗಳ ಪಾಲಿಗೆ ಬಂಡವಾಳ ಸಂಗ್ರಹವು ಇನ್ನಷ್ಟು ಕಠಿಣವಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದಾರೆ.

ಭಾರತದ ನವೋದ್ಯಮಗಳಿಗೆ ಬಂಡವಾಳ ಸಂಗ್ರಹಿಸುವುದು ಕಷ್ಟವಾಗುತ್ತಿರುವುದರಿಂದ ಅಲ್ಲಿ ಈಗಾಗಲೇ ಉದ್ಯೋಗ ಕಡಿತ ನಡೆದಿದೆ ಮತ್ತು ಕೆಲವು ನವೋದ್ಯಮಗಳು ಐಪಿಒ ಮೂಲಕ ಬಂಡವಾಳ ಮಾರುಕಟ್ಟೆ ಪ್ರವೇಶಿಸುವುದು ವಿಳಂಬ ಆಗುತ್ತಿದೆ.

2023ರ ಮೊದಲ ತ್ರೈಮಾಸಿಕದಲ್ಲಿ ಭಾರತದ ನವೋದ್ಯಮಗಳು ₹ 16,200 ಕೋಟಿ ಬಂಡವಾಳ ಸಂಗ್ರಹಿಸಿವೆ. 2022ರ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಬಂಡವಾಳ ಸಂಗ್ರಹವು ಶೇಕಡ 75ರಷ್ಟು ಕುಸಿತ ಕಂಡಿದೆ ಎಂದು ಖಾಸಗಿ ಈಕ್ವಿಟಿ ಕಂಪನಿ ಸಿ.ಬಿ. ಇನ್‌ಸೈಟ್ಸ್‌ ಮಾಹಿತಿ ನೀಡಿದೆ.

ADVERTISEMENT

ಮೊದಲ ತ್ರೈಮಾಸಿಕದಲ್ಲಿ ಸಂಗ್ರಹಿಸಿರುವ ಬಂಡವಾಳವನ್ನು ಗಮನಿಸಿದರೆ 2023ರಲ್ಲಿ ಒಟ್ಟಾರೆ ಬಂಡವಾಳ ಸಂಗ್ರಹವು ₹ 82 ಸಾವಿರ ಕೋಟಿಗಿಂತಲೂ ಕಡಿಮೆ ಆಗಲಿದೆ ಎಂಬ ಅಂದಾಜು ಇದೆ.

2021ರಲ್ಲಿ ಸಂಗ್ರಹ ಆಗಿದ್ದ ದಾಖಲೆಯ ₹ 2.46 ಲಕ್ಷ ಕೋಟಿಗೆ ಹೋಲಿಸಿದರೆ ಈ ಬಾರಿ ಬಂಡವಾಳ ಸಂಗ್ರಹವು ಭಾರಿ ಪ್ರಮಾಣದಲ್ಲಿ ಕಡಿಮೆ ಆಗಬಹುದು. 2022ರಲ್ಲಿ ₹ 1.60 ಲಕ್ಷ ಕೋಟಿ ಬಂಡವಾಳ ಸಂಗ್ರಹ ಆಗಿತ್ತು ಎಂದು ಅದು ಹೇಳಿದೆ.

2022ರ ಮೊದಲ ತ್ರೈಮಾಸಿಕದಲ್ಲಿ 561 ಕಂಪನಿಗಳು ಬಂಡವಾಳ ಸಂಗ್ರಹಿಸಿದ್ದವು. 2023ರ ಇದೇ ಅವಧಿಯಲ್ಲಿ 271 ಕಂಪನಿಗಳು ಮಾತ್ರವೇ ಬಂಡವಾಳ ಸಂಗ್ರಹಿಸಿವೆ.

ಬಂಡವಾಳ ಸಂಗ್ರಹ ಕಡಿಮೆ ಆಗುವುದರಿಂದ ನವೋದ್ಯಮಗಳಿಗೆ ಹಿನ್ನಡೆ ಆಗಲಿದೆ. ಆ ಮೂಲಕ ದೇಶದ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಮಾರುಕಟ್ಟೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ
ಇದೆ.

ಬಡ್ಡಿದರ ಗರಿಷ್ಠ ಮಟ್ಟದಲ್ಲಿ ಇರುವುದು ಹಾಗೂ ಹಣದುಬ್ಬರದಂತಹ ಜಾಗತಿಕ ಅಂಶಗಳು ಭಾರತದಲ್ಲಿ ಮತ್ತು ಇತರೆ ಕಡೆಗಳಲ್ಲಿಯೂ ಹೂಡಿಕೆ ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ.

ಅಮೆರಿಕದಲ್ಲಿ 2023ರ ಮೊದಲ ತ್ರೈಮಾಸಿಕದಲ್ಲಿ ನವೋದ್ಯಮಗಳ ಬಂಡವಾಳ ಸಂಗ್ರಹ ₹ 2.66 ಲಕ್ಷ ಕೋಟಿಗೆ, ಅಂದರೆ ಅರ್ಧದಷ್ಟು, ಕಡಿಮೆ ಆಗಿದೆ. ಚೀನಾದಲ್ಲಿ ಶೇ 60ರಷ್ಟು ಕುಸಿತ ಕಂಡಿದೆ.

ಪೇಟಿಎಂ ಐಪಿಒ ನಂತರ ಸಮಸ್ಯೆ: 2021ರಲ್ಲಿ ಪೇಟಿಎಂ ಕಂಪನಿಯು ಐಪಿಒ ಮೂಲಕ ಬಂಡವಾಳ ಸಂಗ್ರಹಿಸಿತು. ಅದರ ಷೇರುಗಳ ವಹಿವಾಟು ಮಾರುಕಟ್ಟೆಯಲ್ಲಿ ಆರಂಭವಾದ ನಂತರದಲ್ಲಿ, ಮೌಲ್ಯವು ಕುಸಿಯಿತು. ಇದಾದ ನಂತರದಲ್ಲಿ ಭಾರತದ ಮಾರು
ಕಟ್ಟೆಯಲ್ಲಿ ಅತೃಪ್ತಿ ಆರಂಭ ಆಯಿತು. ಹಲವು ನವೋದ್ಯಮಗಳ ಮಾರುಕಟ್ಟೆ ಮೌಲ್ಯವು ಅವಾಸ್ತವಿಕವೇ ಎನ್ನುವ ಪ್ರಶ್ನೆಯನ್ನು ಹೂಡಿಕೆದಾರರು ಮತ್ತು ನಿಯಂತ್ರಣ ಸಂಸ್ಥೆಗಳು ಎತ್ತತೊಡಗಿದವು. ಆ ಬಳಿಕ ನವೋದ್ಯಮಗಳ ಬಂಡವಾಳ ಸಂಗ್ರಹದ ಹಾದಿ ಇನ್ನಷ್ಟು ದುರ್ಗಮವಾಯಿತು.

ಅಮೆರಿಕದ ಹೂಡಿಕೆದಾರರ ಮಾಹಿತಿಯ ಪ್ರಕಾರ, ಈಚೆಗಷ್ಟೇ ಬ್ಲಾಕ್‌ರಾಕ್‌ ಕಂಪನಿಯು ಬೈಜೂಸ್‌ನ ಮಾರುಕಟ್ಟೆ ಮೌಲ್ಯವನ್ನು 22 ಬಿಲಿಯನ್‌ ಡಾಲರ್‌ನಿಂದ 11.15 ಡಾಲರ್‌ಗೆ ಇಳಿಕೆ ಮಾಡಿದೆ. ಇನ್‌ವೆಸ್ಕೊ ಕಂಪನಿಯು ಸ್ವಿಗ್ಗಿಯ ಮಾರುಕಟ್ಟೆ ಮೌಲ್ಯವನ್ನು 8 ಬಿಲಿಯನ್‌ ಡಾಲರ್‌ಗೆ ತಗ್ಗಿಸಿದೆ ಸಿ.ಬಿ. ಇನ್‌ಸೈಟ್ಸ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.