ಎಚ್.ಡಿ.ಕುಮಾರಸ್ವಾಮಿ
ನವದೆಹಲಿ: ತೀವ್ರ ಆರ್ಥಿಕ ನಷ್ಟಕ್ಕೆ ಸಿಲುಕಿ ಖಾಸಗೀಕರಣದ ಹೊಸ್ತಿಲಲ್ಲಿದ್ದ ಆಂಧ್ರಪ್ರದೇಶದ ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆಯನ್ನು ₹11,440 ಕೋಟಿ ವೆಚ್ಚದಲ್ಲಿ
ಪುನಶ್ಚೇತನಗೊಳಿಸಲಾಗುವುದು ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಇಲ್ಲಿನ ಉಕ್ಕು ಸಚಿವಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಖಾನೆಯ ಪುನಶ್ಚೇತನದ ಪ್ಯಾಕೇಜ್ ಅನ್ನು ಘೋಷಣೆ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಗುರುವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ವೈಜಾಗ್ ಸ್ಟೀಲ್ ಪುನಶ್ಚೇತನ ಪ್ಯಾಕೇಜ್‌ಗೆ ಅನುಮೋದನೆ ನೀಡಲಾಗಿದೆ ಎಂದು
ಹೇಳಿದರು.
ಕಾರ್ಖಾನೆಯ ಪುನಶ್ಚೇತನ ಪ್ಯಾಕೇಜ್‌ನ ಪೂರ್ಣ ವಿವರಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು. ಕೆಲವೇ ತಿಂಗಳಲ್ಲಿ ಇಡೀ ಕಾರ್ಖಾನೆ ಪೂರ್ಣ ಪ್ರಮಾಣದಲ್ಲಿ ಉಕ್ಕು ಉತ್ಪಾದನೆಗೆ ಅಗತ್ಯವಾದ ಎಲ್ಲಾ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.
ಅಲ್ಲದೆ, ಕಾರ್ಖಾನೆ ಹೊಂದಿರುವ ಸಾಲವನ್ನು ಗಮನದಲ್ಲಿಟ್ಟುಕೊಂಡು ಉತ್ಪಾದನೆಯ ದಕ್ಷತೆ, ಕ್ಷಮತೆಯನ್ನು ಹೆಚ್ಚಿಸುತ್ತೇವೆ. ವಾರ್ಷಿಕ 7.3 ದಶಲಕ್ಷ ಟನ್ ಉಕ್ಕು ಉತ್ಪಾದನೆಯ ಗುರಿ ಮುಟ್ಟಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.
ಈ ಪ್ಯಾಕೇಜ್‌ನಲ್ಲಿ ₹10,300 ಕೋಟಿ ಹೂಡಿಕೆ ಮಾಡಲಾಗುವುದು. ₹1,140 ಕೋಟಿಯನ್ನು ಷೇರು ರೂಪ
ದಲ್ಲಿ ನಿರ್ವಹಣಾ ಬಂಡವಾಳವಾಗಿ ತೊಡಗಿಸಲಾಗುವುದು. ಈ ಷೇರು ಹಣವನ್ನು ಹತ್ತು ವರ್ಷಗಳವರೆಗೂ
ವಾಪಸ್ ಪಡೆಯಲು ಅವಕಾಶ ಇರುವುದಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.