ADVERTISEMENT

ತಕ್ಷಣಕ್ಕೆ ಪರಿಹಾರ ನೀಡದ ಕೊಡುಗೆ: ಫಿಚ್‌ ಸೊಲುಷನ್ಸ್‌ ವಿಶ್ಲೇಷಣೆ

ರೇಟಿಂಗ್‌ ಸಂಸ್ಥೆ ಫಿಚ್‌ ಸೊಲುಷನ್ಸ್‌ ವಿಶ್ಲೇಷಣೆ

ಪಿಟಿಐ
Published 19 ಮೇ 2020, 19:30 IST
Last Updated 19 ಮೇ 2020, 19:30 IST

ನವದೆಹಲಿ : ಕೇಂದ್ರ ಸರ್ಕಾರವು ಸರಣಿ ಕಂತು ರೂಪದಲ್ಲಿ ಪ್ರಕಟಿಸಿರುವ ಒಟ್ಟಾರೆ ₹ 20.97 ಲಕ್ಷ ಕೋಟಿ ಮೊತ್ತದ ಕೊಡುಗೆಗಳು ಅರ್ಥ ವ್ಯವಸ್ಥೆ ಎದುರಿಸುತ್ತಿರುವ ತಕ್ಷಣದ ಸಂಕಷ್ಟಗಳಿಗೆ ಪರಿಹಾರ ಕಲ್ಪಿಸಿಕೊಡುವುದಿಲ್ಲ ಎಂದು ರೇಟಿಂಗ್‌ ಸಂಸ್ಥೆ ಫಿಚ್‌ ಸೊಲುಷನ್ಸ್‌ ವಿಶ್ಲೇಷಿಸಿದೆ.

ಸರ್ಕಾರ ಹೇಳಿಕೊಂಡಂತೆ ಜಿಡಿಪಿಯ ಶೇ 10ರಷ್ಟು ಕೊಡುಗೆ ಇದಾಗಿಲ್ಲ. ಹೆಚ್ಚುವರಿ ಉತ್ತೇಜನಾ ಕೊಡುಗೆಗಳ ಒಟ್ಟಾರೆ ಹಣಕಾಸಿನ ಹೊರೆಯು ಜಿಡಿಪಿಯ ಶೇ 1ರಷ್ಟು ಮಾತ್ರ ಇರಲಿದೆ. ಕೊಡುಗೆಗಳ ಅರ್ಧದಷ್ಟು ಮೊತ್ತವು, ಈ ಮೊದಲೇ ಘೋಷಿಸಿದ ವಿತ್ತೀಯ ಉಪಕ್ರಮಗಳ ರೂಪದಲ್ಲಿವೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಪ್ರಕಟಿಸಿರುವ ಹಣಕಾಸು ಉತ್ತೇಜನಾ ಕೊಡುಗೆಗಳ ಪರಿಣಾಮವನ್ನೂ ಈ ಕೊಡುಗೆ ಒಳಗೊಂಡಿದೆ.

ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರ ತನ್ನ ವೆಚ್ಚ ಹೆಚ್ಚಿಸಲು ಹಿಂದೇಟು ಹಾಕಿದೆ. ಇದರಿಂದ 2020–21ನೇ ಹಣಕಾಸು ವರ್ಷದಲ್ಲಿನ ಆರ್ಥಿಕ ವೃದ್ಧಿ ದರದ ಮೇಲೆಯೂ ಪ್ರತಿಕೂಲ ಪರಿಣಾಮ ಕಂಡು ಬರಲಿದೆ.

ADVERTISEMENT

ಪರಿಣಾಮಕಾರಿಯಾದ ಉತ್ತೇಜನಾ ಕೊಡುಗೆ ವಿಳಂಬ ಮಾಡಿದಷ್ಟೂ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಲಿದೆ. ಆರ್ಥಿಕತೆಯಲ್ಲಿ ಕವಿದಿರುವ ಮಂಕು ದೂರ ಮಾಡಲು ಸರ್ಕಾರಿ ವೆಚ್ಚ ಹೆಚ್ಚಬೇಕಾಗಿದೆ. ’ಕೋವಿಡ್‌–19’ ಪ್ರಕರಣಗಳಲ್ಲಿನ ಹೆಚ್ಚಳ, ಆಂತರಿಕ ಮತ್ತು ಬಾಹ್ಯ ಬೇಡಿಕೆ ಕುಸಿತದ ಕಾರಣಕ್ಕೆ ಭಾರತದ ಆರ್ಥಿಕ ಬಿಕ್ಕಟ್ಟು ದಿನೇ ದಿನೇ ದೊಡ್ಡದಾಗುತ್ತಿದೆ.

ಈ ತಿಂಗಳ 13 ರಿಂದ 17ರವರೆಗೆ 5 ಕಂತುಗಳಲ್ಲಿ ಪ್ರಕಟಿಸಿದ ಕೊಡುಗೆಗಳಲ್ಲಿ ಸಾಲಕ್ಕೆ ಸರ್ಕಾರದ ಖಾತರಿ, ಬ್ಯಾಂಕ್‌ ಸಾಲ ವಿಸ್ತರಣೆ ಮತ್ತು ನಿಯಂತ್ರಣ ಕ್ರಮಗಳ ತಿದ್ದುಪಡಿಗೆ ಹೆಚ್ಚು ಒತ್ತು ದೊರೆತಿದೆ. ಹೊಸ ವೆಚ್ಚಗಳ ಮೊತ್ತವು ಜಿಡಿಪಿಯ ಶೇ 1ರಷ್ಟಿದೆ. ಇದೂ ಸೇರಿದಂತೆ ಇದುವರೆಗೆ ಸರ್ಕಾರದ ವಿತ್ತೀಯ ಕ್ರಮಗಳ ಮೊತ್ತವು ಜಿಡಿಪಿಯ ಶೇ 1.8ರಷ್ಟಾಗಲಿದೆ.

ಅಲ್ಪಾವಧಿಯಲ್ಲಿ ಪರಿಣಾಮಕಾರಿ: ಹಲವಾರು ಕೊಡುಗೆಗಳ ಪೈಕಿ, ಪಿಂಚಣಿ ನಿಧಿ ಬೆಂಬಲ, ತಾತ್ಕಾಲಿಕ ತೆರಿಗೆ ಕಡಿತ, ಕೃಷಿ ಮೂಲಸೌಕರ್ಯಗಳು ಮೇಲ್ದರ್ಜೆಗೆ, ವಲಸೆ ಕಾರ್ಮಿಕರಿಗೆ ಉಚಿತ ಆಹಾರ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಹೆಚ್ಚಿನ ಅನುದಾನ, ಕೊಯ್ಲು ನಂತರದ ಕೃಷಿ ಚಟುವಟಿಕೆಗಳಿಗೆ ತುರ್ತು ನಿಧಿ ಒದಗಿಸಿರುವುದು ಮಾತ್ರ ಅಲ್ಪಾವಧಿಯಲ್ಲಿ ಪರಿಣಾಮ ಬೀರಲಿವೆ.

ಆರ್ಥಿಕ ಸುಧಾರಣಾ ಕ್ರಮಗಳು, ಸಾಲ ಖಾತರಿ ಮತ್ತಿತರ ಕ್ರಮಗಳು ಕೆಲಮಟ್ಟಿಗೆ ಆರ್ಥಿಕತೆಗೆ ಬೆಂಬಲ ನೀಡಲಿವೆ.

ಕೊಡುಗೆಗಳು ಮುಖ್ಯವಾಗಿ ಮಧ್ಯಮಾವಧಿಯಲ್ಲಿನ ಪೂರೈಕೆ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಿಸಿವೆ. ತಕ್ಷಣದ ಬೇಡಿಕೆ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸಲು ವಿಫಲಗೊಂಡಿವೆ ಎಂದೂ ಫಿಚ್‌ ಹೇಳಿದೆ.

18.1 %

ಲಾಕ್‌ಡೌನ್‌ ವಿಸ್ತರಣೆಯಿಂದ ಸರ್ಕಾರದ ವರಮಾನ ನಷ್ಟ

47 %

ಜಿಡಿಪಿಯಲ್ಲಿನ ಕೇಂದ್ರ ಸರ್ಕಾರದ ಸಾಲದ ಪ್ರಮಾಣ

7.0 %

ಕೇಂದ್ರದ ವಿತ್ತೀಯ ಕೊರತೆ ಹೆಚ್ಚಳ ಅಂದಾಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.