ADVERTISEMENT

ಸಹಕಾರ ಸಂಘಗಳ ಮೂಲಕ ಪೆಟ್ರೋಲಿಯಂ ಉತ್ಪನ್ನ ಮಾರಾಟ

ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಕರಡು ನಿಯಮಗಳಲ್ಲಿ ಪ್ರಸ್ತಾವ

ಪಿಟಿಐ
Published 4 ಜುಲೈ 2022, 15:43 IST
Last Updated 4 ಜುಲೈ 2022, 15:43 IST
   

ನವದೆಹಲಿ (ಪಿಟಿಐ): ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ಪಿಎಸಿಎಸ್) ಪೆಟ್ರೋಲಿಯಂ ಉತ್ಪನ್ನಗಳ ಡೀಲರ್‌ಶಿಪ್‌, ನ್ಯಾಯಬೆಲೆ ಅಂಗಡಿ ನಡೆಸುವುದು, ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸುವ ಪ್ರಸ್ತಾವನೆಯನ್ನು ಕೇಂದ್ರ ಸಿದ್ಧಪಡಿಸಿದೆ.

ಕೇಂದ್ರ ಸಹಕಾರ ಸಚಿವಾಲಯವು ಕರಡು ಉಪನಿಯಮಗಳನ್ನು ಸಿದ್ಧಪಡಿಸಿದೆ. ಈ ಉಪನಿಯಮಗಳಿಗೆ ಜುಲೈ 19ರೊಳಗೆ ಸಲಹೆಗಳನ್ನು ನೀಡುವಂತೆ ಅದು ರಾಜ್ಯ ಸರ್ಕಾರಗಳಿಗೆ ಹಾಗೂ ಇತರ ಪಾಲುದಾರರಿಗೆ ಸೂಚಿಸಿದೆ. ಈಗ ಜಾರಿಯಲ್ಲಿರುವ ನಿಯಮಗಳು ಪಿಎಸಿಎಸ್‌ಗಳಿಗೆ ತಮ್ಮ ಮೂಲ ವಹಿವಾಟು ಹೊರತುಪಡಿಸಿ ಇತರ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸುವುದಿಲ್ಲ.

ಪಿಎಸಿಎಸ್‌ಗಳು ‘ಬ್ಯಾಂಕ್ ಮಿತ್ರ’ ಆಗಿ ಕೆಲಸ ಮಾಡಲು, ಶೈತ್ಯಾಗಾರಗಳು ಹಾಗೂ ಗೋದಾಮು ಸೇವೆ ಒದಗಿಸಲು, ನ್ಯಾಯಬೆಲೆ ಅಂಗಡಿ ಆರಂಭಿಸಲು, ಹೈನುಗಾರಿಕೆ, ಮೀನು ಸಾಕಣೆ, ನೀರಾವರಿ, ಪರಿಸರ ಸ್ನೇಹಿ ಇಂಧನ ವಲಯಗಳಲ್ಲಿ ಕೆಲಸ ಮಾಡಲು ಕರಡು ಉಪನಿಯಮಗಳು ಅವಕಾಶ ಕಲ್ಪಿಸುತ್ತವೆ.

ADVERTISEMENT

ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ, ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ ಚಟುವಟಿಕೆಗಳಲ್ಲಿ ಸಮುದಾಯ ಆಧಾರಿತ ಸೇವೆಗಳನ್ನು ಒದಗಿಸಲು ಅವಕಾಶ ಕಲ್ಪಿಸುತ್ತವೆ. ಪಿಎಸಿಎಸ್‌ಗಳು ಮೂಲಸೌಕರ್ಯ ಅಭಿವೃದ್ಧಿ, ಸಮುದಾಯ ಕೇಂದ್ರ ಅಭಿವೃದ್ಧಿ, ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ, ಆಹಾರ ಧಾನ್ಯಗಳ ಖರೀದಿಯಲ್ಲಿ ತೊಡಗಿಸಿಕೊಳ್ಳಬಹುದು.

ಎಲ್‌ಪಿಜಿ, ಪೆಟ್ರೋಲ್, ಡೀಸೆಲ್, ಪರಿಸರ ಸ್ನೇಹಿ ಇಂಧನ, ಕೃಷಿ ಹಾಗೂ ಮನೆಬಳಕೆ ಉತ್ಪನ್ನಗಳು, ಕೃಷಿ ಯಂತ್ರೋಪಕರಣಗಳ ಡೀಲರ್‌ಶಿಪ್‌ ಪಡೆಯಬಹುದು.

ಕರಡು ಉಪ ನಿಯಮಗಳ ಬಗ್ಗೆ ರಾಜ್ಯ ಸರ್ಕಾರಗಳಿಂದ ಸಲಹೆ ಕೇಳಲಾಗಿದೆ ಎಂದು ಸಹಕಾರ ಸಚಿವ ಅಮಿತ್ ಶಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪಿಎಸಿಎಸ್‌ಗಳು ರಾಜ್ಯ ಪಟ್ಟಿಯಲ್ಲಿ ಬರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.