ನವದೆಹಲಿ: ಬ್ಯಾಂಕ್‌ಗಳು ಆರ್‌ಬಿಐನಿಂದ ಹಣಕಾಸಿನ ನಿರ್ಬಂಧಕ್ಕೆ ಒಳಗಾದಲ್ಲಿ, ಆ ಬ್ಯಾಂಕ್‌ನ ಠೇವಣಿದಾರರಿಗೆ 90 ದಿನಗಳಲ್ಲಿ ₹ 5 ಲಕ್ಷದವರೆಗೆ ವಿಮಾ ಪರಿಹಾರ ಮೊತ್ತ ನೀಡಲು ಅವಕಾಶ ಕಲ್ಪಿಸುವ ‘ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ (ತಿದ್ದುಪಡಿ) ಮಸೂದೆ’ಗೆ (ಡಿಐಸಿಜಿಸಿ ಮಸೂದೆ) ಲೋಕಸಭೆಯು ಸೋಮವಾರ ಅನುಮೋದನೆ ನೀಡಿದೆ.
ವಿರೋಧ ಪಕ್ಷಗಳ ಸದಸ್ಯರು ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಗದ್ದಲ ಎಬ್ಬಿಸಿದ್ದ ಸಂದರ್ಭದಲ್ಲಿ ಈ ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಈ ಮಸೂದೆಯನ್ನು ರಾಜ್ಯಸಭೆಯು ಹಿಂದಿನ ವಾರ ಅನುಮೋದಿಸಿದೆ. ಪಿಎಂಸಿ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿದವರಿಗೆ ಇದರಿಂದ ಪ್ರಯೋಜನ ಆಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.
ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿರುವ, ಆರ್‌ಬಿಐನಿಂದ ನಿರ್ಬಂಧಗಳಿಗೆ ಗುರಿಯಾಗಿರುವ ಒಟ್ಟು 23 ಸಹಕಾರ ಬ್ಯಾಂಕ್‌ಗಳ ಠೇವಣಿದಾರರಿಗೂ ಇದರಿಂದ ಅನುಕೂಲ ಆಗಲಿದೆ ಎಂದು ನಿರ್ಮಲಾ ಅವರು ಸ್ಪಷ್ಟಪಡಿಸಿದರು. ಆರ್‌ಬಿಐನ ಅಂಗಸಂಸ್ಥೆ ಆಗಿರುವ ಡಿಐಸಿಜಿಸಿ ಬ್ಯಾಂಕ್ ಠೇವಣಿದಾರರಿಗೆ ವಿಮಾ ಸೌಲಭ್ಯವನ್ನು ನೀಡಲಿದೆ.
ಈಗಿರುವ ನಿಯಮಗಳ ಅನುಸಾರ, ಬ್ಯಾಂಕ್ ನಿರ್ಬಂಧಕ್ಕೆ ಒಳಗಾದ ನಂತರ ಠೇವಣಿದಾರರಿಗೆ ವಿಮಾ ಮೊತ್ತ ಸಿಗಲು 8–10 ವರ್ಷಗಳು ಬೇಕಾಗುವುದೂ ಇದೆ.
ತಿದ್ದುಪಡಿ ಮಸೂದೆಗೆ ಸಂಸತ್ತಿನ ಅನುಮೋದನೆ ದೊರೆತಿರುವ ಕಾರಣ, ಬೆಂಗಳೂರಿನ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಹಣ ಠೇವಣಿ ಇರಿಸಿದ್ದವರಿಗೂ ₹ 5 ಲಕ್ಷದವರೆಗಿನ ವಿಮಾ ಪರಿಹಾರ ಮೊತ್ತದ ಪ್ರಯೋಜನ ಸಿಗಲಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿಸೂರ್ಯ ಹೇಳಿದ್ದಾರೆ. ಈ ಬ್ಯಾಂಕ್‌ನ ಅಂದಾಜು 40 ಸಾವಿರ ಠೇವಣಿದಾರರಿಗೆ ಪ್ರಯೋಜನ ಆಗಲಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.