ADVERTISEMENT

ನವರಾತ್ರಿ: ವಾಹನ ಮಾರಾಟಕ್ಕೆ ಹೊಸ ಕಳೆ

ಜಿಎಸ್‌ಟಿ ದರ ಪರಿಷ್ಕರಣೆಯ ಪರಿಣಾಮ, ವಾಣಿಜ್ಯ ವಾಹನ ಮಾರಾಟವೂ ಚುರುಕು

ಪಿಟಿಐ
Published 7 ಅಕ್ಟೋಬರ್ 2025, 15:36 IST
Last Updated 7 ಅಕ್ಟೋಬರ್ 2025, 15:36 IST
new cars sale
car purchase and gst
new cars sale car purchase and gst   

ನವದೆಹಲಿ: ನವರಾತ್ರಿ ಹಬ್ಬದ ಸಂದರ್ಭದಲ್ಲಿ ದೇಶದಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಪ್ರಮಾಣವು ಶೇಕಡ 35ರಷ್ಟು ಏರಿಕೆ ದಾಖಲಿಸಿದೆ. ಹಬ್ಬದ ಹೊತ್ತಿನಲ್ಲಿ ಮಾರಾಟ ಜೋರಾಗಿ ನಡೆದಿದ್ದರಿಂದಾಗಿ, ಸೆಪ್ಟೆಂಬರ್‌ ತಿಂಗಳ ಮಾರಾಟ ಪ್ರಮಾಣವೂ ಹೆಚ್ಚಳ ಕಂಡಿದೆ.

ಸೆಪ್ಟೆಂಬರ್‌ ತಿಂಗಳ ಮೊದಲ 21 ದಿನ ವಾಹನ ಮಾರಾಟವು ಹೆಚ್ಚಿರಲಿಲ್ಲ. ಸೆಪ್ಟೆಂಬರ್‌ 22ರಿಂದ ಪರಿಷ್ಕೃತ ಜಿಎಸ್‌ಟಿ ದರ ಜಾರಿಗೆ ಬಂತು. ಆ ದಿನದಿಂದ ವಾಹನ ಮಾರಾಟ ಹೆಚ್ಚಾಯಿತು ಎಂದು ಆಟೊಮೊಬೈಲ್‌ ಡೀಲರ್‌ಗಳ ಸಂಘಗಳ ಒಕ್ಕೂಟ (ಎಫ್‌ಎಡಿಎ) ಮಂಗಳವಾರ ಹೇಳಿದೆ.

ನವರಾತ್ರಿಯ ವೇಳೆಯಲ್ಲಿ ಈ ಬಾರಿ ಒಟ್ಟು 2.17 ಲಕ್ಷ ಪ್ರಯಾಣಿಕ ವಾಹನಗಳ ಮಾರಾಟ ಆಗಿದೆ. ಹಿಂದಿನ ವರ್ಷದ ನವರಾತ್ರಿ ಹಬ್ಬದಲ್ಲಿ ಮಾರಾಟ ಸಂಖ್ಯೆ 1.61 ಲಕ್ಷ ಆಗಿತ್ತು.

ADVERTISEMENT

ಈ ಬಾರಿ ಹಬ್ಬದ ಸಂದರ್ಭದಲ್ಲಿನ ಭರ್ಜರಿ ಮಾರಾಟದಿಂದಾಗಿ, ಸೆಪ್ಟೆಂಬರ್‌ ತಿಂಗಳಿನಲ್ಲಿ ಒಟ್ಟು 2.99 ಲಕ್ಷ ಪ್ರಯಾಣಿಕ ವಾಹನಗಳ ಮಾರಾಟ ಆದಂತಾಗಿದೆ. ಇದು ಹಿಂದಿನ ವರ್ಷದ ಇದೇ ತಿಂಗಳಲ್ಲಿ 2.82 ಲಕ್ಷ ಆಗಿತ್ತು.

‘ದೇಶದ ಆಟೊಮೊಬೈಲ್‌ ಉದ್ಯಮದ ಪಾಲಿಗೆ ಈ ವರ್ಷದ ಸೆಪ್ಟೆಂಬರ್‌ ತಿಂಗಳು ಅಸಾಧಾರಣವಾಗಿತ್ತು. ಮೊದಲ ಮೂರು ವಾರಗಳಲ್ಲಿ ಬೇಡಿಕೆಯು ಹೆಚ್ಚು ಇರಲಿಲ್ಲ. ಜಿಎಸ್‌ಟಿ ದರ ಪರಿಷ್ಕರಣೆ ಜಾರಿಗೆ ಬರುವುದನ್ನು ಗ್ರಾಹಕರು ಕಾಯುತ್ತಿದ್ದರು. ನವರಾತ್ರಿ ಹಬ್ಬದ ಆರಂಭದ ದಿನದಿಂದಲೇ ಜಿಎಸ್‌ಟಿ ಪರಿಷ್ಕೃತ ದರ ಕೂಡ ಜಾರಿಗೆ ಬಂದ ಪರಿಣಾಮವಾಗಿ, ತಿಂಗಳ ಕೊನೆಯ ವಾರದಲ್ಲಿ ಸ್ಥಿತಿ ಸಂಪೂರ್ಣ ಬದಲಾಯಿತು’ ಎಂದು ಎಫ್‌ಎಡಿಎ ಉಪಾಧ್ಯಕ್ಷ ಸಾಯಿ ಗಿರಿಧರ್ ಹೇಳಿದ್ದಾರೆ.

ನವರಾತ್ರಿಯ ಸಂದರ್ಭದಲ್ಲಿ ಡೀಲರ್‌ಗಳ ಬಳಿ ಗ್ರಾಹಕರು ಹಿಂದಿನ ದಾಖಲೆಗಳನ್ನೆಲ್ಲ ಮುರಿಯುವಷ್ಟು ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಶುರುವಾದ ಖರೀದಿ ಉತ್ಸಾಹವು ದೀಪಾವಳಿಯವರೆಗೂ ಇರಲಿದೆ. ಹೀಗಾಗಿ 42 ದಿನಗಳ ಹಬ್ಬದ ಅವಧಿಯು ಬಹಳ ಭರವಸೆಯೊಂದಿಗೆ ಕೊನೆಗೊಳ್ಳಲಿದೆ ಎಂದು ಎಫ್‌ಎಡಿಎ ಅಂದಾಜು ಮಾಡಿದೆ.

ದ್ವಿಚಕ್ರ ವಾಹನ ಮಾರಾಟ ಜೋರು: ನವರಾತ್ರಿ ಸಂದರ್ಭದಲ್ಲಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ 36ರಷ್ಟು ಹೆಚ್ಚಳ ದಾಖಲಾಗಿದೆ. ಹಿಂದಿನ ವರ್ಷದ ನವರಾತ್ರಿಯ ಅವಧಿಯಲ್ಲಿ 6.14 ಲಕ್ಷ ವಾಹನಗಳ ಮಾರಾಟ ಆಗಿತ್ತು. ಈ ಬಾರಿ ಅದು 8.35 ಲಕ್ಷ ವಾಹನಗಳಿಗೆ ಏರಿಕೆ ಕಂಡಿದೆ. ನವರಾತ್ರಿಯ ವೇಳೆ ತ್ರಿಚಕ್ರ ವಾಹನಗಳ ಮಾರಾಟದಲ್ಲಿ ಶೇ 25ರಷ್ಟು ಹೆಚ್ಚಳ ಆಗಿದೆ. ವಾಣಿಜ್ಯ ವಾಹನಗಳ ಮಾರಾಟ ಪ್ರಮಾಣ ಶೇ 15ರಷ್ಟು ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.