ADVERTISEMENT

ಪ್ರಯಾಣಿಕ ವಾಹನ ಮಾರಾಟದಲ್ಲಿ ಏರಿಕೆ

ಪಿಟಿಐ
Published 11 ಸೆಪ್ಟೆಂಬರ್ 2020, 12:24 IST
Last Updated 11 ಸೆಪ್ಟೆಂಬರ್ 2020, 12:24 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಭಾರತದಲ್ಲಿ ಪ್ರಯಾಣಿಕ ವಾಹನಗಳ ಮಾರಾಟವು ಆಗಸ್ಟ್‌ ತಿಂಗಳಿನಲ್ಲಿ ಶೇಕಡ 14.16ರಷ್ಟು ಚೇತರಿಕೆ ದಾಖಲಿಸಿದೆ ಎಂದು ಭಾರತೀಯ ಆಟೊಮೊಬೈಲ್‌ ತಯಾರಕರ ಸಂಘ (ಸಿಯಾಮ್) ಹೇಳಿದೆ. ಲಾಕ್‌ಡೌನ್‌ ಅವಧಿಯಲ್ಲಿ ವಾಹನ ಖರೀದಿ ಮಾಡಲು ಆಗದವರು ಈ ಅವಧಿಯಲ್ಲಿ ಖರೀದಿಸಿರುವ ಕಾರಣ ಮಾರಾಟ ಚೇತರಿಕೆ ಕಂಡಿದೆ ಎಂಬುದು ಅದು ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ವರ್ಷದ ಆಗಸ್ಟ್‌ನಲ್ಲಿ ಒಟ್ಟು 2.15 ಲಕ್ಷ ಪ್ರಯಾಣಿಕ ವಾಹನಗಳ ಮಾರಾಟ ಆಗಿದೆ. ಹಿಂದಿನ ವರ್ಷದ ಆಗಸ್ಟ್‌ನಲ್ಲಿ ಒಟ್ಟು 1.89 ಲಕ್ಷ ಮಾರಾಟ ಆಗಿತ್ತು. ಈ ಬಾರಿಯ ಆಗಸ್ಟ್‌ಗೂ ಮೊದಲಿನ ಒಂಬತ್ತು ತಿಂಗಳುಗಳಲ್ಲಿ ಪ್ರಯಾಣಿಕ ವಾಹನಗಳ ಮಾರಾಟವು ನಿರಂತರವಾಗಿ ಕುಸಿತ ಕಂಡಿತ್ತು.

ಈ ಬಾರಿಯ ಆಗಸ್ಟ್‌ ತಿಂಗಳಿನಲ್ಲಿ ಪ್ರಯಾಣಿಕ ಕಾರುಗಳ ಮಾರಾಟ 1.24 ಲಕ್ಷ ಆಗಿತ್ತು. 2019ರ ಆಗಸ್ಟ್‌ನಲ್ಲಿ 1.09 ಲಕ್ಷ ಕಾರುಗಳು ಮಾರಾಟ ಆಗಿದ್ದವು. ಈ ಬಾರಿಯ ಆಗಸ್ಟ್‌ನಲ್ಲಿ ಮಾರಾಟವಾಗಿರುವಬಹುಉಪಯೋಗಿ ವಾಹನಗಳ ಸಂಖ್ಯೆ 81,842. ಹಿಂದಿನ ವರ್ಷದ ಆಗಸ್ಟ್‌ನಲ್ಲಿ ಈ ಬಗೆಯ ಒಟ್ಟು 70,837 ವಾಹನಗಳು ಮಾರಾಟವಾಗಿದ್ದವು.

ADVERTISEMENT

ವ್ಯಾನ್‌ಗಳ ಮಾರಾಟದಲ್ಲಿ ಕೂಡ ಹೆಚ್ಚಳ ಕಂಡುಬಂದಿದೆ. ಹಿಂದಿನ ವರ್ಷದ ಆಗಸ್ಟ್‌ನಲ್ಲಿ ಒಟ್ಟು 9,015 ವ್ಯಾನ್‌ಗಳ ಮಾರಾಟ ಆಗಿತ್ತು. ಈ ಆಗಸ್ಟ್‌ನಲ್ಲಿ 9,359 ವ್ಯಾನ್‌ಗಳು ಮಾರಾಟವಾಗಿವೆ.

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ 3ರಷ್ಟು ಹೆಚ್ಚಳ ಕಂಡುಬಂದಿದೆ. ದ್ವಿಚಕ್ರ ವಾಹನಗಳ ಪೈಕಿ ಮೋಟಾರ್‌ಸೈಕಲ್‌ ಮಾರಾಟದಲ್ಲಿ ಶೇ 10.13ರಷ್ಟು ಏರಿಕೆ ಆಗಿದ್ದು, ಸ್ಕೂಟರ್ ಮಾರಾಟದಲ್ಲಿ ಶೇ 12.3ರಷ್ಟು ಇಳಿಕೆ ಆಗಿದೆ. ‘ಕೆಲವು ಹಬ್ಬಗಳು ಹತ್ತಿರವಾಗುತ್ತಿದ್ದು, ವಾಹನ ಉದ್ಯಮವು ವೇಗವಾಗಿ ಚೇತರಿಕೆ ಕಾಣಲು ಹಬ್ಬಗಳು ನೆರವಾಗುತ್ತವೆ’ ಎಂದು ಸಿಯಾಮ್‌ ಮಹಾನಿರ್ದೇಶಕ ರಾಜೇಶ್ ಮೆನನ್ ಆಶಾಭಾವ ವ್ಯಕ್ತಪಡಿಸಿದ್ದಾರೆ.

ಅಂಕಿ–ಅಂಶ

* ಪ್ರಯಾಣಿಕ ಕಾರು ಮಾರಾಟ ಹೆಚ್ಚಳ-14.13%

* ಬಹುಉಪಯೋಗಿ ವಾಹನಗಳ ಮಾರಾಟ ಹೆಚ್ಚಳ-15.54%

* ವ್ಯಾನ್‌ ಮಾರಾಟದಲ್ಲಿನ ಹೆಚ್ಚಳ-3.82%

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.