ADVERTISEMENT

ರಾಜಸ್ಥಾನದಲ್ಲಿ ₹ 100ರ ಗಡಿ ದಾಟಿದ ಪೆಟ್ರೋಲ್

ಪಿಟಿಐ
Published 17 ಫೆಬ್ರುವರಿ 2021, 11:19 IST
Last Updated 17 ಫೆಬ್ರುವರಿ 2021, 11:19 IST
   

ನವದೆಹಲಿ: ತೈಲ ಮಾರಾಟ ಕಂಪನಿಗಳು ಸತತ ಒಂಬತ್ತನೆಯ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿವೆ. ಇದರಿಂದಾಗಿ, ದೇಶದಲ್ಲಿ ಇದೇ ಮೊದಲ ಬಾರಿಗೆ ಕೆಲವೆಡೆ ಪೆಟ್ರೋಲ್‌ ಬೆಲೆಯು ₹ 100ರ ಗಡಿ ದಾಟಿದೆ.

ಬ್ರ್ಯಾಂಡೆಡ್ ಪೆಟ್ರೋಲ್ ಬೆಲೆಯು ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಕೆಲವೆಡೆ ಈಗಾಗಲೇ ₹ 100 ಗಡಿ ದಾಟಿ ಆಗಿತ್ತು. ಈ ಬಗೆಯ ಪೆಟ್ರೋಲ್‌ಗೆ ಹೆಚ್ಚಿನ ತೆರಿಗೆ ವಿಧಿಸಲಾಗಿದೆ. ಮಾಮೂಲಿ ಪೆಟ್ರೋಲ್‌ ದೇಶದಲ್ಲಿ ₹ 100 ಗಡಿಯನ್ನು ಈ ಹಿಂದೆ ಎಂದೂ ದಾಟಿರಲಿಲ್ಲ.

ರಾಜಸ್ಥಾನದ ಶ್ರೀಗಂಗಾನಗರ ಪಟ್ಟಣದಲ್ಲಿ ಲೀಟರ್ ಪೆಟ್ರೋಲ್ ಬೆಲೆ ಬುಧವಾರ ₹ 100.13 ಆಗಿದೆ. ದೇಶದಲ್ಲಿ ಪೆಟ್ರೋಲ್ ಮೇಲೆ ಅತಿಹೆಚ್ಚಿನ ಪ್ರಮಾಣದ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಇರುವುದು ರಾಜಸ್ಥಾನದಲ್ಲಿ.

ADVERTISEMENT

ಬುಧವಾರ ಆದ ಹೆಚ್ಚಳದ ನಂತರ ದೆಹಲಿಯಲ್ಲಿ ಪೆಟ್ರೋಲ್ ಬೆಲೆಯು ₹ 89.54, ಮುಂಬೈನಲ್ಲಿ ₹ 96 ಆಗಿದೆ. ಡೀಸೆಲ್ ದೆಹಲಿಯಲ್ಲಿ ₹ 79.95ಕ್ಕೆ, ಮುಂಬೈನಲ್ಲಿ ₹ 86.98ಕ್ಕೆ ಮಾರಾಟವಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ₹ 92.54ಕ್ಕೆ, ಡೀಸೆಲ್ ₹ 84.75ಕ್ಕೆ ಮಾರಾಟ ಆಗಿವೆ.

ಮಧ್ಯಪ್ರದೇಶದ ಅನುಪ್ಪುರ್‌ನಲ್ಲಿ ಪೆಟ್ರೋಲ್‌ ಬೆಲೆ ₹ 99.90ಕ್ಕೆ ತಲುಪಿದೆ. ಇಲ್ಲಿ ಡೀಸೆಲ್‌ ಬೆಲೆ ₹ 90.35 ಆಗಿದೆ. ಹಿಂದಿನ ಒಂಬತ್ತು ದಿನಗಳ ಅವಧಿಯಲ್ಲಿ ಪೆಟ್ರೋಲ್ ಬೆಲೆ ₹ 2.59ರಷ್ಟು, ಡೀಸೆಲ್ ಬೆಲೆ ₹ 2.82ರಷ್ಟು ಹೆಚ್ಚಳ ಕಂಡಿದೆ.

ತೈಲ ಬೆಲೆ ನಿರಂತರವಾಗಿ ಹೆಚ್ಚಿಸುತ್ತಿರುವುದನ್ನು ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಟೀಕಿಸಿವೆ. ತೆರಿಗೆ ಪ್ರಮಾಣ ತಗ್ಗಿಸಿ, ಜನಸಾಮಾನ್ಯರ ಮೇಲಿನ ಹೊರೆಯನ್ನು ಕಡಿಮೆ ಮಾಡಬೇಕು ಎಂದು ಅವು ಆಗ್ರಹಿಸಿವೆ.

2020ರ ಮಾರ್ಚ್‌ ಮಧ್ಯಭಾಗದ ನಂತರ ಲೀಟರ್ ಪೆಟ್ರೋಲ್ ದರವು ₹ 19.95ರಷ್ಟು, ಡೀಸೆಲ್ ದರವು ₹ 17.66ರಷ್ಟು ಹೆಚ್ಚಳ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.