ADVERTISEMENT

ಮುಂದಿನ ವಾರದಿಂದ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ ಆರಂಭ?

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಏರಿಕೆ ಪರಿಣಾಮ: ಜೆಪಿ ಮೋರ್ಗನ್‌ ವರದಿ

ಪಿಟಿಐ
Published 2 ಮಾರ್ಚ್ 2022, 11:11 IST
Last Updated 2 ಮಾರ್ಚ್ 2022, 11:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೇಶದಲ್ಲಿ ಮುಂದಿನ ವಾರದಿಂದ ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯನ್ನು ಮತ್ತೆ ಆರಂಭಿಸುವ ಸಾಧ್ಯತೆ ಇದೆ ಎಂದು ಜೆಪಿ ಮೋರ್ಗನ್‌ ವರದಿ ಹೇಳಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರವು ಪ್ರತಿ ಬ್ಯಾರಲ್‌ಗೆ 100 ಡಾಲರ್‌ ದಾಟಿದ್ದಕ್ಕೆ ಅನುಗುಣವಾಗಿ ಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ದರವು ₹ 9ರಷ್ಟು ಹೆಚ್ಚಳ ಆಗಬೇಕಿತ್ತು. ಆದರೆ, ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಯ ಕಾರಣಕ್ಕಾಗಿಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಇಂಧನ ದರವನ್ನು ಈಚೆಗೆ ಹೆಚ್ಚಳ ಮಾಡಿಲ್ಲ. ಆದರೆ, ಮುಂದಿನ ವಾರದಿಂದ ಇಂಧನ ದರ ಹೆಚ್ಚಳವು ಆರಂಭ ಆಗಲಿದೆ. 118 ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಬದಲಾವಣೆ ಆಗಿಲ್ಲ.

ರಷ್ಯಾ–ಉಕ್ರೇನ್‌ ಸಂಘರ್ಷ ಆರಂಭ ಆದಾಗಿನಿಂದ ಕಚ್ಚಾತೈಲ ದರವು ಭಾರಿ ಏರಿಕೆ ಕಾಣುತ್ತಿದೆ. ಎಕ್ಸೈಸ್‌ ಸುಂಕದಲ್ಲಿ ಪ್ರತಿ ಲೀಟರಿಗೆ ₹ 1ರಿಂದ ₹ 3ರವರೆಗೆ ಕಡಿತ ಹಾಗೂ ರಿಟೇಲ್‌ ಮಾರಾಟ ದರದಲ್ಲಿ ಪ್ರತಿ ಲೀಟರಿಗೆ ₹ 5ರಿಂದ ₹ 8ರವರೆಗೆ ಏರಿಕೆ ಮಾಡುವ ಮೂಲಕ ಕಚ್ಚಾ ತೈಲ ದರ ಏರಿಕೆಯನ್ನು ಸರಿದೂಗಿಸುವ ನಿರೀಕ್ಷೆ ಇದೆ ಎಂದು ಜೆಪಿ ಮೋರ್ಗನ್ ಹೇಳಿದೆ.

ADVERTISEMENT

ಪೆಟ್ರೋಲಿಯಂ ಸಚಿವಾಲಯದ ‘ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ಘಟಕ’ದ (ಪಿಪಿಎಸಿ) ಪ್ರಕಾರ, ಭಾರತವು ಖರೀದಿಸುವ ಕಚ್ಚಾ ತೈಲ ದರವು ಮಾರ್ಚ್‌ 1ರಂದು ಪ್ರತಿ ಬ್ಯಾರಲ್‌ಗೆ 102 ಡಾಲರ್‌ ಇತ್ತು. ಕಳೆದ ವರ್ಷ ನವೆಂಬರ್ ಆರಂಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಬದಲಾವಣೆ ಮಾಡದೇ ಇರಲು ನಿರ್ಧರಿಸಿದಾಗ ಕಚ್ಚಾ ತೈಲ ದರವು ಪ್ರತಿ ಬ್ಯಾರಲ್‌ಗೆ ಸರಾಸರಿ 81.5 ಡಾಲರ್‌ ಇತ್ತು.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಅಂತಿಮ ಹಂತದ ಮತದಾನವು ಮಾರ್ಚ್‌ 7ರಂದು ನಡೆಯಲಿದ್ದು, 10ರಂದು ಮತ ಎಣಿಕೆ ನಡೆಯಲಿದೆ. ಆ ಬಳಿಕ ನಿತ್ಯವೂ ಇಂಧನ ದರದಲ್ಲಿ ಏರಿಕೆ ಆರಂಭ ಆಗುವ ನಿರೀಕ್ಷೆ ಹೊಂದಲಾಗಿದೆ ಎಂದು ವರದಿ ತಿಳಿಸಿದೆ.

ತೈಲ ದರ ಇನ್ನಷ್ಟು ಏರಿಕೆ ಸಂಭವ: ಒಂದೊಮ್ಮೆ ರಷ್ಯಾದಿಂದ ತೈಲ ಪೂರೈಕೆಯು ಸಂಪೂರ್ಣವಾಗಿ ಸ್ಥಗಿತಗೊಂಡಲ್ಲಿ ಕಚ್ಚಾ ತೈಲ ದರವು ಬ್ಯಾರಲ್‌ಗೆ 150 ಡಾಲರ್‌ಗಳವರೆಗೂ ಏರಿಕೆ ಆಗಬಹುದು ಎಂದು ಜೆಪಿ ಮೋರ್ಗನ್‌ ಅಂದಾಜು ಮಾಡಿದೆ.

ಮುಖ್ಯಾಂಶಗಳು

ಎಕ್ಸೈಸ್‌ ಸುಂಕ ಲೀಟರಿಗೆ ₹ 1–3ರವರೆಗೆ ಕಡಿತ ಸಂಭವ

ಪೆಟ್ರೋಲ್‌, ಡೀಸೆಲ್‌ ದರ ಲೀಟರಿಗೆ ₹ 5–8ರವರೆಗೆ ಹೆಚ್ಚಳ ಸಾಧ್ಯತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.