ADVERTISEMENT

ತೈಲ ಬೆಲೆ ನಿರಂತರವಾಗಿ ತಗ್ಗಿದರೆ ಮಾತ್ರ ಪೆಟ್ರೋಲ್‌, ಡೀಸೆಲ್‌ ದರ ಇಳಿಕೆ

ಪಿಟಿಐ
Published 28 ನವೆಂಬರ್ 2021, 11:38 IST
Last Updated 28 ನವೆಂಬರ್ 2021, 11:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ನಿರಂತರವಾಗಿ ಇಳಿಕೆ ಕಂಡಲ್ಲಿ ಮಾತ್ರವೇ ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಇಳಿಕೆ ಆಗಲಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಏಷ್ಯಾದಲ್ಲಿ ಬ್ರೆಂಟ್‌ ಕಚ್ಚಾ ತೈಲ ದರವು ಶುಕ್ರವಾರ ಪ್ರತಿ ಬ್ಯಾರಲ್‌ಗೆ 4 ಡಾಲರ್‌ಗಳಷ್ಟು ಇಳಿಕೆ ಆಗಿತ್ತು. ಅದಕ್ಕೂ ಮುನ್ನ ನವೆಂಬರ್‌ 25ರವರೆಗೂ ಪ್ರತಿ ಬ್ಯಾರಲ್‌ಗೆ 80 ಡಾಲರ್‌ಗಳಿಂದ 82 ಡಾಲರ್‌ಗಳ ಆಸುಪಾಸಿನಲ್ಲಿ ಇತ್ತು. ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಕೋವಿಡ್‌ನ ಹೊಸ ತಳಿಯು ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ ಮತ್ತು ತೈಲ ಬೇಡಿಕೆ ಕುಸಿಯುವಂತೆ ಮಾಡಲಿದೆ ಎನ್ನುವ ಭಯದಿಂದಾಗಿ ಶುಕ್ರವಾರ ಬ್ರೆಂಟ್‌ ತೈಲ ದರದಲ್ಲಿ ಭಾರಿ ಇಳಿಕೆ ಆಗಿರುವಂತೆ ಕಾಣುತ್ತಿದೆ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.

ಶುಕ್ರವಾರದ ಕಚ್ಚಾ ತೈಲ ದರದಲ್ಲಿ ಆಗಿರುವ ಇಳಿಕೆಯಿಂದ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ತಗ್ಗಲಿದೆ ಎನ್ನುವ ನಿರೀಕ್ಷೆ ವ್ಯಕ್ತವಾಗಿತ್ತು. ಆದರೆ, ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಹಿಂದಿನ ಹದಿನೈದು ದಿನಗಳ ಅಂತರರಾಷ್ಟ್ರೀಯ ಇಂಧನ ದರದ ಸರಾಸರಿಯನ್ನು ಆಧರಿಸಿ ರಿಟೇಲ್‌ ಮಾರಾಟ ದರವನ್ನು ಪರಿಷ್ಕರಣೆ ಮಾಡುತ್ತವೆ. ಹೀಗಾಗಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಹೇಳಿವೆ.

ADVERTISEMENT

ಕಚ್ಚಾ ತೈಲ ದರವು ಇನ್ನೂ ಕೆಲವು ದಿನಗಳವರೆಗೆ ಇಳಿಕೆ ಆದಲ್ಲಿ ಆಗ ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ನ ರಿಟೇಲ್‌ ಮಾರಾಟ ದರವು ಕಡಿಮೆ ಆಗಬಹುದು ಎಂದು ತಿಳಿಸಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆ ಆಗುವಂತೆ ಮಾಡಲು ಭಾರತ, ಅಮೆರಿಕ, ಜಪಾನ್‌, ದಕ್ಷಿಣ ಕೊರಿಯಾ ದೇಶಗಳು ತಮ್ಮ ಸಂಗ್ರಹಾಗಾರದಲ್ಲಿ ಇದ್ದ ತೈಲವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿವೆ. ಇದು ಸಹ ಅಂತರರಾಷ್ಟ್ರೀಯ ಬೆಲೆಗಳ ಮೇಲೆ ಹೆಚ್ಚು ಪರಿಣಾಮ ಬೀರಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.