ADVERTISEMENT

ದೇಶದ ಕೆಲವೆಡೆ ಪೆಟ್ರೋಲ್, ಡೀಸೆಲ್ ಖಾಲಿ!

ಪಿಟಿಐ
Published 15 ಜೂನ್ 2022, 16:26 IST
Last Updated 15 ಜೂನ್ 2022, 16:26 IST
ದಾವಣಗೆರೆಯ ಅಂಬೇಡ್ಕರ್ ವೃತ್ತದ ಬಳಿಯಿರುವ ಪೆಟ್ರೋಲ್‌ ಬಂಕ್‌ನಲ್ಲಿ ವಾಹನ ಸವಾರರು ಎಂದಿನಂತೆ ಪೆಟ್ರೋಲ್‌ ತುಂಬಿಸುತ್ತಿರುವುದು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಅಂಬೇಡ್ಕರ್ ವೃತ್ತದ ಬಳಿಯಿರುವ ಪೆಟ್ರೋಲ್‌ ಬಂಕ್‌ನಲ್ಲಿ ವಾಹನ ಸವಾರರು ಎಂದಿನಂತೆ ಪೆಟ್ರೋಲ್‌ ತುಂಬಿಸುತ್ತಿರುವುದು –ಪ್ರಜಾವಾಣಿ ಚಿತ್ರ   

ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ ಮತ್ತು ಕರ್ನಾಟಕದ ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖಾಲಿ ಆಗಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳ ಪೆಟ್ರೋಲ್ ಬಂಕ್‌ಗಳಲ್ಲಿ ಬೇಡಿಕೆಯು ಇದ್ದಕ್ಕಿದ್ದಂತೆ ಹೆಚ್ಚಾಗಿದ್ದು ಇಂಧನ ಖಾಲಿಯಾಗಲು ಕಾರಣ.

ಕೆಲವು ಖಾಸಗಿ ಕಂಪನಿಗಳ ಪೆಟ್ರೋಲ್ ಬಂಕ್‌ಗಳು ನಷ್ಟ ಭರಿಸಲಾಗದೆ, ತೈಲ ಮಾರಾಟ ಕಡಿಮೆ ಮಾಡಿದ ನಂತರದಲ್ಲಿ ಈ ರೀತಿ ಆಗಿದೆ. ಈ ನಡುವೆ, ಪೆಟ್ರೋಲ್ ಹಾಗೂ ಡೀಸೆಲ್ ಸಂಗ್ರಹವು ಅಗತ್ಯ ಪ್ರಮಾಣದಲ್ಲಿ ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಖಾಸಗಿ ಕಂಪನಿಗಳ ಬಂಕ್‌ಗಳಲ್ಲಿ ಇಂಧನ ಖರೀದಿಸುತ್ತಿದ್ದವರು, ಸರ್ಕಾರಿ ಕಂಪನಿಗಳ ಬಂಕ್‌ಗಳ ಕಡೆ ಮುಖ ಮಾಡಿದ ಕಾರಣದಿಂದಾಗಿ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕೆಲವು ಬಂಕ್‌ಗಳಲ್ಲಿ ಇಂಧನ ದಾಸ್ತಾನು ಖಾಲಿಯಾಯಿತು.

ADVERTISEMENT

ರಾಜಸ್ಥಾನ, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಇಂಧನ ಬೇಡಿಕೆ ಜೂನ್ ಮೊದಲಾರ್ಧದಲ್ಲಿ ಶೇ 50ರಷ್ಟು ಹೆಚ್ಚಳವಾದ ವರದಿಗಳಿವೆ. ಮುಂಗಾರಿನ ಜೊತೆ ಬೆಸೆದುಕೊಂಡಿರುವ ಕೃಷಿ ಚಟುವಟಿಕೆಗಳು ಹಾಗೂ ಸಗಟು ಖರೀದಿದಾರರು ಖಾಸಗಿ ಕಂಪನಿಗಳ ಬಂಕ್‌ಗಳನ್ನು ಬಿಟ್ಟು ಸರ್ಕಾರಿ ಕಂಪನಿಗಳ ಬಂಕ್‌ಗಳತ್ತ ಮುಖ ಮಾಡಿದ್ದು ಬೇಡಿಕೆ ಹೆಚ್ಚಳಕ್ಕೆ ಕಾರಣ ಎಂದು ಕೇಂದ್ರ ಹೇಳಿದೆ.

‘ಬೇಡಿಕೆಯಲ್ಲಿನ ಹೆಚ್ಚಳವನ್ನು ನಿಭಾಯಿಸಲು ಸಾಕಾಗುವಷ್ಟು ಪೆಟ್ರೋಲ್, ಡೀಸೆಲ್ ಉತ್ಪಾದನೆ ದೇಶದಲ್ಲಿದೆ. ಬೇಡಿಕೆ ಹೆಚ್ಚಳವನ್ನು ನಿಭಾಯಿಸಲು ಕಂಪನಿಗಳು ಕ್ರಮ ತೆಗೆದುಕೊಂಡಿವೆ. ಡಿ‍ಪೊಗಳಲ್ಲಿ, ಬಂಕ್‌ಗಳಲ್ಲಿ ಇಂಧನ ಹೆಚ್ಚು ಲಭ್ಯವಿರುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಇಂಧನ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.