ADVERTISEMENT

ಎನ್‌ಪಿಎಸ್‌ ಹೂಡಿಕೆಗೆ ಸ್ತ್ರೀಯರ ನಿರಾಸಕ್ತಿ

ಖಾಸಗಿ ವಲಯದ ಚಂದಾದಾರರ ಸಂಖ್ಯೆ 55 ಲಕ್ಷಕ್ಕೆ ಹೆಚ್ಚಿಸಲು ಕ್ರಮ: ಪಿಎಫ್‌ಆರ್‌ಡಿಎ

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 15:43 IST
Last Updated 12 ಜನವರಿ 2024, 15:43 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ರಾಷ್ಟ್ರೀಯ ಪಿಂಚಣಿ ಯೋಜನೆಯಡಿ (ಎನ್‌ಪಿಎನ್) ಖಾಸಗಿ ವಲಯದ 51 ಲಕ್ಷ ಚಂದಾದಾರರಿದ್ದಾರೆ. 2023–24ನೇ ಹಣಕಾಸು ವರ್ಷದ ಅಂತ್ಯಕ್ಕೆ ಚಂದಾದಾರರನ್ನು 55 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ತಿಳಿಸಿದೆ.

‘2023ರ ಡಿಸೆಂಬರ್‌ 23ರವರೆಗೆ ಖಾಸಗಿ ವಲಯದ ಎನ್‌ಪಿಎಸ್‌ ನಿರ್ವಹಣಾ ಸಂಪತ್ತಿನ ಮೌಲ್ಯವು (ಎಯುಎಂ) ₹2.04 ಲಕ್ಷ ಕೋಟಿ ಇದೆ. ಹಣಕಾಸು ವರ್ಷದ ಅಂತ್ಯಕ್ಕೆ ₹2.20 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ’ ಎಂದು ಪಿಎಫ್‌ಆರ್‌ಡಿಎ ಅಧ್ಯಕ್ಷ ಡಾ.ದೀಪಕ್‌ ಮೊಹಂತಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಪಿಂಚಣಿ ಮತ್ತು ಹೂಡಿಕೆ ಬಗ್ಗೆ ಮಹಿಳೆಯರಲ್ಲಿ ಆಸಕ್ತಿ ಕಡಿಮೆಯಿದೆ. ಎನ್‌ಪಿಎಸ್‌ ಚಂದಾದಾರರ ಪೈಕಿ ಶೇ 21.2ರಷ್ಟು ಮಹಿಳೆಯರಿದ್ದಾರೆ. ಹಾಗಾಗಿ, ಸ್ತ್ರೀಯರಲ್ಲಿ ಪಿಂಚಣಿ ಮಹತ್ವ ಕುರಿತು ಅರಿವು ಮೂಡಿಸಲು ಪ್ರಾಧಿಕಾರ ದೇಶದಾದ್ಯಂತ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ ಎಂದರು.

ಎನ್‌ಪಿಎಸ್‌ ಹಣವನ್ನು ಷೇರು ಮಾರುಕಟ್ಟೆ, ಸಾಲ ಪತ್ರಗಳು, ಸರ್ಕಾರಿ ಬಾಂಡ್‌ಗಳು, ಕಾರ್ಪೊರೇಟ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಕಳೆದ ಮೂರು ವರ್ಷಗಳಲ್ಲಿ ಶೇ 17ರಷ್ಟು ಆದಾಯ ಲಭಿಸಿದೆ ಎಂದು ತಿಳಿಸಿದರು.

ಚಂದಾದಾರರ ಸಂಖ್ಯೆ ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳು, ವ್ಯಾಪಾರಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಡಿಜಿಟಲ್‌ ಮಾಧ್ಯಮ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲೂ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.