ADVERTISEMENT

ಬದುಕು ಕಟ್ಟಿಕೊಟ್ಟ ಉಪ್ಪಿನಕಾಯಿ: ‘ಎಂ.ಎನ್‌, ಪಿಕಲ್ಸ್‌’ ಯಶೋಗಾಥೆ

‘ಎಂ.ಎನ್‌, ಪಿಕಲ್ಸ್‌’ ಉಪ್ಪಿನಕಾಯಿ ಉದ್ದಿಮೆಯ ಯಶೋಗಾಥೆ

ಎಂ.ನವೀನ್ ಕುಮಾರ್
Published 3 ಸೆಪ್ಟೆಂಬರ್ 2019, 19:30 IST
Last Updated 3 ಸೆಪ್ಟೆಂಬರ್ 2019, 19:30 IST
ಕೆಲಸಗಾರರ ಜೊತೆಯಲ್ಲಿ ಮಾಲೀಕ ಎಂ.ಆರ್.ಸತೀಶ್, ಶ್ರೀಮತಿ ವಾಣಿ, ಪುತ್ರ ರಾಜೀವ್.
ಕೆಲಸಗಾರರ ಜೊತೆಯಲ್ಲಿ ಮಾಲೀಕ ಎಂ.ಆರ್.ಸತೀಶ್, ಶ್ರೀಮತಿ ವಾಣಿ, ಪುತ್ರ ರಾಜೀವ್.   

ರಾಜ್ಯದಲ್ಲಿ ಮನೆಮಾತಾಗಿರುವ ‘ಎಂ.ಎನ್‌, ಪಿಕಲ್ಸ್‌’ ಉಪ್ಪಿನಕಾಯಿ ಉದ್ದಿಮೆಯ ಯಶೋಗಾಥೆಯನ್ನು ಇಲ್ಲಿ ವಿವರಿಸಲಾಗಿದೆ.

***

ಮನೆಗಳಲ್ಲಿ ಮಾತ್ರ ತಯಾರಿಸುತ್ತಿದ್ದ ಉಪ್ಪಿನಕಾಯಿ ಇಂದು ಬಹುದೊಡ್ಡ ಉದ್ಯಮವಾಗಿ ಬೆಳೆದಿದೆ. ಈ ಉದ್ಯಮ ಕ್ಷೇತ್ರದ ಮಾರುಕಟ್ಟೆ ವ್ಯಾಪ್ತಿ ಕರ್ನಾಟಕದ ಉದ್ದಗಲಕ್ಕೂ ತಲುಪಿದ ಪರಿಯೆ ವಿಸ್ಮಯ. ಇದಕ್ಕೆ ಬಹುಮುಖ್ಯ ಕಾರಣ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪದ ಎಂ.ಎನ್.ಪಿಕಲ್ಸ್ .

ADVERTISEMENT

ಎಂಬತ್ತರ ದಶಕದಲ್ಲಿ ಉಪ್ಪಿನಕಾಯಿಯನ್ನು ಅಂಗಡಿಯಲ್ಲಿ ಇಟ್ಟು ಮಾರಾಟ ಮಾಡುವುದೇ ಎಂದು ಜನರು ಮೂಗು ಮುರಿಯುತ್ತಿದ್ದಾಗ ಅದನ್ನು ಸವಾಲಾಗಿ ಸ್ವೀಕರಿಸಿ ಗುಣಮಟ್ಟ, ರುಚಿ ಹಾಗೂ ಸತತ ಪ್ರಯತ್ನದಿಂದ ರಾಜ್ಯದಲ್ಲಿ ಉಪ್ಪಿನಕಾಯಿ ಉದ್ಯಮ ಕ್ಷೇತ್ರಕ್ಕೆ ಗಟ್ಟಿ ತಳಹದಿ ಹಾಕುವಲ್ಲಿ ಎಂ. ಎನ್‌. ಪಿಕಲ್ಸ್‌ ಬಹುಮುಖ್ಯ ಪಾತ್ರ ನಿರ್ವಹಿಸಿದೆ. ಇಂದು ರಾಜ್ಯದಲ್ಲಿ 200ಕ್ಕೂ ಹೆಚ್ಚು ಉಪ್ಪಿನಕಾಯಿ ತಯಾರಿಸುವ ಕೈಗಾರಿಕೆಗಳಿವೆ. ಹತ್ತು ಸಾವಿರಕ್ಕೂ ಹೆಚ್ಚು ಗ್ರಾಮೀಣ ಭಾಗದ ಜನರಿಗೆ ನೇರ ಉದ್ಯೋಗ ಲಭಿಸಿದೆ.

ಇದಕ್ಕೆ ಪ್ರಮುಖ ಕಾರಣ ಎಂ.ಎನ್.ಪಿಕಲ್ಸ್‌ನ ಸಂಸ್ಥಾಪಕರಾದ ಮಾಸೂರು ನಾರಾಯಣಪ್ಪ ಕುಟುಂಬ. ನಾರಾಯಣಪ್ಪ ಅವರು ತುಂಬಾ ರುಚಿಯಾದ ಮಾವಿನಕಾಯಿ ಉಪ್ಪಿನಕಾಯಿ ಹಾಕುತ್ತಿದ್ದರು. ಅದನ್ನು ಸ್ನೇಹಿತರು, ಬಂಧುಗಳು ಕೇಳಿ ಒಯ್ಯುತ್ತಿದ್ದರು. ಒಮ್ಮೆ ತಮ್ಮ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಬಂದಾಗ ಈ ಉಪ್ಪಿನಕಾಯಿಯನ್ನು ದೊಡ್ಡ ಪ್ರಮಾಣದಲ್ಲಿ ತಯಾರು ಮಾಡಿ ಬೇರೆ ಊರುಗಳಿಗೆ ವಿತರಿಸುವ ಬಗ್ಗೆ ತಮ್ಮ ಮಗ ರಾಮಚಂದ್ರಶ್ರೇಷ್ಠಿಯವರ ಜತೆಗೆ ಸಮಾಲೋಚಿಸಿ ಉದ್ಯಮ ಪ್ರಾರಂಭ ಮಾಡಿದರು.

ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರು.

ಆರಂಭದಲ್ಲಿ ವರ್ಷಕ್ಕೆ 50 ರಿಂದ 100 ಕೆ.ಜಿ.ಉಪ್ಪಿನಕಾಯಿ ಮಾರಾಟ ಮಾಡುತ್ತಿದ್ದ ಇವರು, ಇಂದು 5 ಲಕ್ಷ ಕೆ.ಜಿ. ಉಪ್ಪಿನಕಾಯಿ ಮಾರಾಟ ಮಾಡುತ್ತಿದ್ದಾರೆ. ಮೊದಲು ತಮ್ಮ ಕುಟುಂಬದ ಸದಸ್ಯರೇ ಉಪ್ಪಿನಕಾಯಿ ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗುತ್ತಿದ್ದರು. ಈಗ 80 ಕುಟುಂಬಗಳು ನೇರವಾಗಿ ಉಪ್ಪಿನಕಾಯಿ ತಯಾರಿಕೆಯಲ್ಲಿ ತೋಡಗಿಸಿಕೊಂಡಿವೆ. ಮಾರಾಟ ವಿಭಾಗದಲ್ಲಿ 100ಕ್ಕೂ ಹೆಚ್ಚೂ ಕುಟುಂಬಗಳ ಜೀವನ ಸಾಗುತ್ತಿದೆ. ಈ ಉದ್ದಿಮೆಯು ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿದೆ. ಘಟಕದಲ್ಲಿ ಶೇ 95ರಷ್ಟು ಮಹಿಳೆಯರಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಡಲಾಗಿದೆ. ಕೆಲಸ ಬೇಡಿ ಬಂದವರಿಗೆ ವಾಪಸ್ಸು ಕಳುಹಿಸಿದ ಉದಾಹರಣೆ ಸಿಗುವುದಿಲ್ಲ. ಹೀಗಾಗಿ, ಬಡವರು, ಹಿಂದುಳಿದವರು, ಅಲ್ಪಸಂಖ್ಯಾತ ಮಹಿಳೆಯರಿಗೆ ಇದು ಜೀವನಾಧಾರವಾಗಿದೆ.

ಮಾವಿನಕಾಯಿ, ಅಪ್ಪೆ ಮಿಡಿ, ನಿಂಬೆಕಾಯಿ, ಕವಳೆಕಾಯಿ ಸೇರಿದಂತೆ 35 ಬಗೆಯ ಉಪ್ಪಿನಕಾಯಿ, ಮಸಾಲೆ ಪದಾರ್ಥಗಳು, ನೈಸರ್ಗಿಕ ಕಷಾಯ, ಹಪ್ಪಳ, ಮಜ್ಜಿಗೆ ಮೆಣಸು ತಯಾರಿಸಲಾಗುತ್ತಿದೆ.

ಈ ಭಾಗದ ರೈತರಿಗೆ ಕೆಲವು ವಿಶೇಷ ಬೆಳೆಯ ಬೀಜಗಳನ್ನು ಇವರೇ ನೀಡಿ ಕೃಷಿಗೆ ಪ್ರೇರಣೆ ನೀಡಿದ್ದಾರೆ. ಈ ಭಾಗದ ಕೆಲ ರೈತರು ಅಂಬೆಹಳದಿ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಈ ಉತ್ಪನ್ನವನ್ನು ರಾಜ್ಯದ ಎಲ್ಲಾ ಉಪ್ಪಿನಕಾಯಿ ತಯಾರಿಕ ಘಟಕಗಳು ಈ ಭಾಗದ ರೈತರಿಂದ ಖರೀದಿಸುತ್ತವೆ. ಅರಿಷಿಣ, ಮೆಣಸಿನಕಾಯಿ, ಮಾವು, ನಿಂಬೆ, ಕವಳೆ ಸೇರಿದಂತೆ ಹಲವು ಬಗೆಯ ಬೆಳೆಗಳನ್ನು ರೈತರು ಇಲ್ಲಿ ಮಾರಾಟ ಮಾಡುತ್ತಿರುವುದರಿಂದ ಉತ್ತಮವಾದ ಬೆಲೆ ಸಹ ರೈತರಿಗೆ ಲಭಿಸುತ್ತಿದೆ.

ಶಿರಾಳಕೊಪ್ಪದ ಎಂ.ಎನ್.ಉಪ್ಪಿನಕಾಯಿ ತಯಾರಿಕ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರು.

ದೇಶದಾದ್ಯಂತ ಸಾವಿರಾರು ಉಪ್ಪಿನಕಾಯಿ ತಯಾರಿಕಾ ಘಟಕಗಳು ಈಗ ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲಾ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಉಪ್ಪಿನಕಾಯಿ ತಯಾರಕರ ಸಮಸ್ಯಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ಸಂಘ ಸ್ಥಾಪಿಸಲಾಗಿದೆ. ಸಂಘದ ಅಧ್ಯಕ್ಷರಾಗಿ ಸಂಸ್ಥಾಪಕ ಎಂ.ಎನ್.ರಾಮಚಂದ್ರ ಶ್ರೇಷ್ಠಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಎನ್.ರಾಮಚಂದ್ರ ಶ್ರೇಷ್ಠಿ ಅವರ ಹಿರಿಯ ಪುತ್ರ ಎಂ.ಆರ್.ಸತೀಶ್ ಈ ಉದ್ಯಮವನ್ನು ಮುಂದುವರೆಸಿಕೊಂಡು ಸಾಗುತ್ತಿದ್ದಾರೆ.

ಉದ್ಯಮವು 3 ತಲೆಮಾರುಗಳನ್ನು ಕಂಡಿದೆ. ಪ್ರಾರಂಭದ ದಿನಗಳಲ್ಲಿ ಉಪ್ಪಿನಕಾಯಿಯನ್ನು ಅಂಗಡಿಗಳಲ್ಲಿ ಇಟ್ಟು ಮಾರಾಟ ಮಾಡಲು ಹಿಂದೆ ಮುಂದೆ ನೋಡಲಾಗುತ್ತಿತ್ತು. ಈಗ ಇ–ಕಾಮರ್ಸ್‌ ತಾಣ ಅಮೆಜಾನ್‌ನಲ್ಲೂ ಮಾರಾಟ ಮಾಡಲಾಗುತ್ತಿದೆ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.