ADVERTISEMENT

ಅರ್ಥವ್ಯವಸ್ಥೆಗೆ 26 ಟ್ರಿಲಿಯನ್ ಡಾಲರ್‌ ಮೌಲ್ಯ: ಪೀಯೂಷ್ ಗೋಯಲ್

ಮುಂಬೈನಲ್ಲಿ ನಡೆದ ಜಿಇಸಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪೀಯೂಷ್ ಗೋಯಲ್ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 16:24 IST
Last Updated 18 ಫೆಬ್ರುವರಿ 2026, 16:24 IST
   

ಮುಂಬೈ: 2026ರಿಂದ 2047ರ ನಡುವೆ ಭಾರತವು ತನ್ನ ಅರ್ಥ ವ್ಯವಸ್ಥೆಗೆ ಅಂದಾಜು 26 ಟ್ರಿಲಿಯನ್‌ ಡಾಲರ್‌ನಷ್ಟು (₹2,358 ಲಕ್ಷ ಕೋಟಿ) ಮೌಲ್ಯವನ್ನು ಸೇರ್ಪಡೆ ಮಾಡುವ ಅಂದಾಜು ಇದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.

‘ಅರ್ಥ ವ್ಯವಸ್ಥೆಯಲ್ಲಿನ ಈ ಬಗೆಯ ಬೆಳವಣಿಗೆಯು ಹಿಂದೆಂದೂ ಕಾಣದಂಥದ್ದು, ಇದು ಜಗತ್ತಿನ ಇತರ ಯಾವುದೇ ದೇಶದಲ್ಲಿಯೂ ಕಾಣಲು ಸಿಗಲಿಕ್ಕಿಲ್ಲ’ ಎಂದು ಗೋಯಲ್ ಅವರು ಜಾಗತಿಕ ಆರ್ಥಿಕ ಸಹಕಾರ (ಜಿಇಸಿ) ಸಮಾವೇಶದಲ್ಲಿ ಹೇಳಿದ್ದಾರೆ.

‘ಆರ್ಥಿಕವಾಗಿ ಏಕಾಂಗಿಯಾಗಿಸುವ ಕಾಲಘಟ್ಟ ಮುಗಿದಿದೆ. ಹೀಗಾಗಿಯೇ ನಾವು ಪಾಲುದಾರಿಕೆ ಮಾಡಿಕೊಳ್ಳುತ್ತಿದ್ದೇವೆ, ನಮ್ಮ ಸ್ನೇಹವನ್ನು ಹೆಚ್ಚಿಸುತ್ತಿದ್ದೇವೆ, ಶಕ್ತಿವಂತನ ಸ್ಥಾನದಲ್ಲಿ ನಿಂತು ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದೇವೆ. ನಾಲ್ಕು ವರ್ಷಗಳಲ್ಲಿ ಒಂಬತ್ತು ಇಂತಹ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ, ಇನ್ನೂ ಒಂದು ಒಪ್ಪಂದ ಆಗಲಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಮುಕ್ತ ವ್ಯಾಪಾರ ಒಪ್ಪಂದ ಅಂದರೆ ನಮ್ಮ ಪಾಲಿಗೆ ಭಾರತದ ಭವಿಷ್ಯದ ಪಾಲುದಾರ ಆಗುವಂತೆ ಆಹ್ವಾನ ನೀಡುವುದು, ಜಗತ್ತಿನಲ್ಲಿ ನಾಲ್ಕನೆಯ ಅತಿದೊಡ್ಡ ಅರ್ಥ ವ್ಯವಸ್ಥೆಯನ್ನು ಇಂದು ಹೊಂದಿರುವ ಭಾರತವನ್ನು 2027–28ರ ಹೊತ್ತಿಗೆ ಮೂರನೆಯ ಅತಿದೊಡ್ಡ ಅರ್ಥ ವ್ಯವಸ್ಥೆಯನ್ನಾಗಿಸುವ ಪಯಣದಲ್ಲಿ ಭಾಗಿಯಾಗಲು ಆಹ್ವಾನಿಸುವುದು. ಈ ಪಯಣದಲ್ಲಿ ಭಾಗಿಯಾಗಲು ಜಗತ್ತು ಬಯಸುತ್ತಿದೆ. ಮುಕ್ತ ಮನಸ್ಸು ಹೊಂದಿರುವ, ವಿಶ್ವಾಸಾರ್ಹತೆ ಸಂಪಾದಿಸಿರುವ ಭಾರತವು ಪ್ರಾಮಾಣಿಕವಾಗಿ ಮುಂದೆ ಬರುವ ಯಾವುದೇ ಪಾಲುದಾರರನ್ನು ಸ್ವಾಗತಿಸಲು ಸಿದ್ಧವಿದೆ’ ಎಂದಿದ್ದಾರೆ.

ಅಭಿವೃದ್ಧಿ ಹೊಂದಿರುವ 39 ದೇಶಗಳ ಜೊತೆ ಭಾರತವು ಈಗ ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆ ಪೂರ್ಣಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ. ಈ ಎಲ್ಲ ಮುಕ್ತ ವ್ಯಾಪಾರ ಒಪ್ಪಂದಗಳಲ್ಲಿ ರೈತರ ಹಿತಾಸಕ್ತಿಯನ್ನು ಪೂರ್ಣವಾಗಿ ರಕ್ಷಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ದೇಶದ ಎಂಎಸ್‌ಎಂಇ ವಲಯದ ಉದ್ದಿಮೆಗಳ ಬೆಳವಣಿಗೆಯನ್ನು ಖಾತರಿಪಡಿಸಿ, ದೇಶದ ಮೀನುಗಾರರನ್ನು ರಕ್ಷಿಸಿ, ದೇಶದ ಉದ್ಯೋಗಗಳನ್ನು ಕಾಪಾಡಿಕೊಂಡು ಈ ಎಫ್‌ಟಿಎಗಳು ಜವಳಿ, ಪಾದರಕ್ಷೆ ಮತ್ತು ಚರ್ಮದ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸಿಕೊಟ್ಟಿವೆ ಎಂದು ಗೋಯಲ್ ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.