ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಚಂದಾದಾರರಿಗೆ ಎಟಿಎಂ ಮೂಲಕ ಭವಿಷ್ಯ ನಿಧಿ (ಪಿಎಫ್) ಹಣವನ್ನು ಹಿಂಪಡೆಯುವ ಸೌಲಭ್ಯ ಕಲ್ಪಿಸಲು ಕೇಂದ್ರ ಕಾರ್ಮಿಕ ಸಚಿವಾಲಯ ಮುಂದಾಗಿದೆ.
ಚಂದಾದಾರರು ಈಗ ಹಣ ಹಿಂಪಡೆಯಲು ಇಪಿಎಫ್‌ಒಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿದೆ. ಈ ಪ್ರಕ್ರಿಯೆಯು ಪೂರ್ಣಗೊಳ್ಳಲು 7ರಿಂದ 10 ದಿನಗಳು ಬೇಕು. ಆ ನಂತರ ಫಲಾನುಭವಿಯ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ.
ಹೊಸ ವ್ಯವಸ್ಥೆಯಡಿ ಕ್ಲೇಮುಗೆ ಅನುಮೋದನೆ ದೊರೆತ ಬಳಿಕ ಆ ಹಣವನ್ನು ಫಲಾನುಭವಿಗಳು ಎಟಿಎಂನಲ್ಲಿ ಪಡೆಯಬಹುದಾಗಿದೆ. ಚಂದಾದಾರರಿಗೆ ಇದಕ್ಕಾಗಿಯೇ ಪ್ರತ್ಯೇಕ ಎಟಿಎಂ ಕಾರ್ಡ್ ವಿತರಿಸುವ ಸಾಧ್ಯತೆಯಿದೆ. ಇದರಿಂದ 7 ಕೋಟಿಗೂ ಹೆಚ್ಚು ಚಂದಾದಾರರಿಗೆ ಅನುಕೂಲವಾಗಲಿದೆ.
‘ಚಂದಾದಾರರಿಗೆ ತ್ವರಿತ ಹಾಗೂ ಸುಲಭವಾಗಿ ಸೌಲಭ್ಯ ಕಲ್ಪಿಸುವುದಕ್ಕಾಗಿ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಸುಧಾರಣೆಗೆ ಇಪಿಎಫ್‌ಒ ಒತ್ತು ನೀಡಿದೆ. ಮುಂದಿನ ವರ್ಷದ ಜನವರಿಯಿಂದ ಎಟಿಎಂ ಮೂಲಕ ಪಿಎಫ್ ಹಣ ಪಡೆಯುವ ಹೊಸ ಯೋಜನೆಯು ಜಾರಿಗೊಳ್ಳಲಿದೆ’ ಎಂದು ಸಚಿವಾಲಯದ ಕಾರ್ಯದರ್ಶಿ ಸುಮಿತಾ ದಾವ್ರಾ ಅವರು, ಪಿಟಿಐಗೆ ತಿಳಿಸಿದ್ದಾರೆ.
ವೈದ್ಯಕೀಯ, ಮನೆ ನಿರ್ಮಾಣ, ನಿವೇಶನ ಖರೀದಿ ಸೇರಿ ಇತರೆ ಉದ್ದೇಶಗಳಿಗೆ ಚಂದಾದಾರರ ಕ್ಲೇಮುಗಳ ತ್ವರಿತ ಇತ್ಯರ್ಥಕ್ಕೆ ಕ್ರಮವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಹಣ ಹಿಂಪಡೆಯುವ ಪ್ರಕ್ರಿಯೆಗಳು ಮತ್ತಷ್ಟು ಸುಲಭಗೊಳ್ಳಲಿವೆ ಎಂದು ಹೇಳಿದ್ದಾರೆ.
ಇಪಿಎಫ್‌ಒ ವ್ಯವಸ್ಥೆಯನ್ನು ಬ್ಯಾಂಕಿಂಗ್ ವ್ಯವಸ್ಥೆಯ ಮಾದರಿಗೆ ಮೇಲ್ದರ್ಜೆಗೇರಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ. ಕ್ಲೇಮು ಇತ್ಯರ್ಥದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು. ಆ ಮೂಲಕ ಚಂದಾದಾರರ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದು ವಿವರಿಸಿದ್ದಾರೆ.
ಇಪಿಎಫ್‌ಒದಿಂದ ಇಪಿಎಫ್ ಖಾತೆದಾರರಿಗೆ ಉದ್ಯೋಗಿಯ ಠೇವಣಿ ಆಧಾರಿತ ವಿಮಾ (ಇಡಿಎಲ್‌ಐ) ಸೌಲಭ್ಯ ಕಲ್ಪಿಸಲಾಗಿದೆ. ಈ ಯೋಜನೆಯಡಿ ಖಾತೆದಾರರಿಗೆ ಗರಿಷ್ಠ ₹7 ಲಕ್ಷದವರೆಗೆ ವಿಮೆ ಸಿಗುತ್ತದೆ. ಉದ್ಯೋಗಿಯು ಮೃತಪಟ್ಟರೆ ಆತನ ಕುಟುಂಬಕ್ಕೆ ಆರ್ಥಿಕ ನೆರವು ದೊರೆಯಲಿದೆ.
ಇಡಿಎಲ್‌ಐನಡಿ ಲಭಿಸುವ ಹಣವನ್ನು ಸಂತ್ರಸ್ತ ಕುಟುಂಬದವರು ಎಟಿಎಂ ಮೂಲಕ ಪಡೆಯುವ ಅವಕಾಶ ಕಲ್ಪಿಸಲು ಸಚಿವಾಲಯ ಸಿದ್ಧತೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.