ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹16 ಸಾವಿರ ಕೋಟಿ ಸಾಲ ವಸೂಲಾತಿಯ ಗುರಿ ಹೊಂದಲಾಗಿದೆ. ವಸೂಲಾಗದ ಸಾಲದ ಪ್ರಮಾಣವನ್ನು ಶೇ 1ರ ಮಿತಿಯಲ್ಲಿಯೇ ಕಾಯ್ದುಕೊಳ್ಳಲಾಗುವುದು ಎಂದು ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ತಿಳಿಸಿದೆ.
2024-25ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ₹4,773 ಕೋಟಿ ಸಾಲ ವಸೂಲಾತಿಯಾಗಿತ್ತು. ಪೂರ್ಣ ಆರ್ಥಿಕ ವರ್ಷದಲ್ಲಿ ₹14,336 ಕೋಟಿ ವಸೂಲಾತಿಯಾಗಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಶೋಕ್ ಚಂದ್ರ ಅವರು, ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಬ್ಯಾಂಕ್‌ನ ರೈಟ್ ಆಫ್ ಮಾಡಲಾದ ಸಾಲದ ಮೊತ್ತ ₹91 ಸಾವಿರ ಕೋಟಿ ಆಗಿದೆ. ಈ ಪೈಕಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹6 ಸಾವಿರ ಕೋಟಿ ವಸೂಲಾತಿಗೆ ಗುರಿ ಹೊಂದಲಾಗಿದೆ. ಪ್ರತಿ ತ್ರೈಮಾಸಿಕಕ್ಕೆ ಕನಿಷ್ಠ ₹1,500 ಕೋಟಿ ವಸೂಲಾತಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಕಳೆದ ಆರ್ಥಿಕ ವರ್ಷದಲ್ಲಿ ಒಟ್ಟಾರೆ ಸಾಲದ ಪೈಕಿ ಚಿಲ್ಲರೆ, ಕೃಷಿ ಮತ್ತು ಎಂಎಸ್‌ಎಂಇ ವಲಯಕ್ಕೆ ₹6.02 ಲಕ್ಷ ಕೋಟಿ (ಶೇ 56) ಸಾಲ ನೀಡಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈ ಪ್ರಮಾಣವನ್ನು ಶೇ 58ಕ್ಕೆ ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ಕಳೆದ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ಒಟ್ಟು ₹26.83 ಲಕ್ಷ ಕೋಟಿ ವಹಿವಾಟು ನಡೆಸಿದ್ದು, ₹16,630 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.