ADVERTISEMENT

ಪ್ರಶ್ನೋತ್ತರ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 19:30 IST
Last Updated 25 ಫೆಬ್ರುವರಿ 2020, 19:30 IST
   

ಭೋಜ ಶೆಟ್ಟಿ ಕೆ., ಹೆಬ್ರಿ (ಉಡುಪಿ)

ನಾನು ಮಾಜಿ ಸೈನಿಕ. ವಯಸ್ಸು 64. ಒಟ್ಟು ವಾರ್ಷಿಕ ಪಿಂಚಣಿ ₹ 3,15,240. ₹ 5 ಸಾವಿರ ಆರ್‌.ಡಿ ಮಾಡಿದ್ದೇನೆ. ಪಿಂಚಣಿ ಮೊತ್ತಕ್ಕೆ ತೆರಿಗೆ ಬರುತ್ತದೆಯೇ. ಹಾಗೂ ಐ.ಟಿ. ರಿಟರ್ನ್ಸ್‌ ತುಂಬಬೇಕೇ?

ಉತ್ತರ: ಮಾಜಿ ಸೈನಿಕರಾದರೂ, ನೀವು ಪಡೆಯುವ ಪಿಂಚಣಿಗೆ ತೆರಿಗೆ ವಿನಾಯ್ತಿ ಇಲ್ಲ. 2019ರ ಏಪ್ರಿಲ್‌ನಿಂದ ಎಲ್ಲಾ ವರ್ಗದ ಜನರಿಗೂ ₹ 5 ಲಕ್ಷಗಳವರೆಗಿನ ಆದಾಯಕ್ಕೆ ತೆರಿಗೆ ಬರುವುದಿಲ್ಲ. ಇದೇ ವೇಳೆ ₹ 5 ಲಕ್ಷ ಹೊರತುಪಡಿಸಿ ಸೆಕ್ಷನ್‌ 16ರ ಪ್ರಕಾರ ₹ 50 ಸಾವಿರ ಸ್ಟ್ಯಾಂಡರ್ಡ್‌ ಡಿಡಕ್ಷನ್‌, ಬ್ಯಾಂಕ್‌ ಠೇವಣಿಯಲ್ಲಿ ಬಡ್ಡಿ ಬಂದರೆ ಸೆಕ್ಷನ್‌ 80ಟಿಟಿಡಿ ಪ್ರಕಾರ ಗರಿಷ್ಠ ₹50 ಸಾವಿರ ವಿನಾಯ್ತಿ ಇದೆ. ಒಟ್ಟಿನಲ್ಲಿ ನಿಮ್ಮ ಆದಾಯ ₹ 6 ಲಕ್ಷ ದಾಟುವ ತನಕ ನೀವು ತೆರಿಗೆಗೆ ಒಳಗಾಗುವುದಿಲ್ಲ. ನಿಮ್ಮ ವಾರ್ಷಿಕ ಆದಾಯ ₹ 3 ಲಕ್ಷ ದಾಟುವುದರಿಂದ ಐ.ಟಿ ರಿಟರ್ನ್ಸ್‌ ತುಂಬಬೇಕಾಗುತ್ತದೆ. ಈ ವರ್ಷದ ಜುಲೈ ಅಂತ್ಯದ ಒಳಗೆ ಐ.ಟಿ ರಿಟರ್ನ್ಸ್‌ ಸಲ್ಲಿಸಿ.

ADVERTISEMENT

***

ಮಂಜುನಾಥ, ಸಾಗರ

ನನ್ನ ಹೆಸರಿನಲ್ಲಿ ಬೆಂಗಳೂರಿನಲ್ಲಿ ಒಂದು ನಿವೇಶನವಿದೆ. ಇದನ್ನು ನನ್ನ ರಕ್ತ ಸಂಬಂಧಿಗಳಲ್ಲಿ ಯಾರಿಗಾದರೂ ದಾನ ಅಥವಾ ನಾಮ ನಿರ್ದೇಶನ ಮಾಡುವಲ್ಲಿ ಸರ್ಕಾರದಿಂದ ನಿಗದಿಪಡಿಸಿದ ಮೌಲ್ಯಕ್ಕೆ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ ತೆರಬೇಕಾಗುತ್ತದೆಯೇ. ಬಂಡವಾಳ ಗಳಿಕೆ ಅಥವಾ ಆದಾಯ ತೆರಿಗೆ ಯಾರಿಗೆ ಬರುತ್ತದೆ?

ಉತ್ತರ: ರಕ್ತ ಸಂಬಂಧಿಗಳಲ್ಲಿ ಚರ–ಸ್ಥಿರ ಆಸ್ತಿಗಳನ್ನು ದಾನದ ರೂಪದಲ್ಲಿ ವರ್ಗಾಯಿಸಿದರೆ, ಕೊಡುವವರಿಗಾಗಲೀ, ಪಡೆಯುವವರಿಗಾಗಲಿ ಬಂಡವಾಳ ಗಳಿಕೆ ಅಥವಾ ಆದಾಯ ತೆರಿಗೆ ಬರುವುದಿಲ್ಲ. ನಿಮ್ಮ ಪ್ರಶ್ನೆಯಲ್ಲಿ ತಿಳಿಸಿದಂತೆ ಸರ್ಕಾರ ನಿಗದಿಪಡಿಸಿದ ಬೆಲೆಯ ಮುದ್ರಾಂಕ ಶುಲ್ಕ ಬರುವುದಿಲ್ಲ. ನೋಂದಣಿ ಖರ್ಚು ಮಾತ್ರವೇ ಬರುತ್ತದೆ. ಸ್ಥಿರ ಆಸ್ತಿಗೆ ದಾನಪತ್ರ ಅಥವಾ ಕ್ರಯಪತ್ರ ಮಾಡುತ್ತಾರೆ. ಚರ ಆಸ್ತಿಗೆ ಮಾತ್ರ ನಾಮ ನಿರ್ದೇಶನ ಮಾಡುತ್ತಾರೆ. ಮುಂದೆ ದಾನ ಪಡೆದ ವ್ಯಕ್ತಿ ನೀವು ಕೊಟ್ಟ ನಿವೇಶನ ಮಾರಾಟ ಮಾಡುವಲ್ಲಿ ಬರುವ ಮೊತ್ತಕ್ಕೆ ಹಣದುಬ್ಬರ ವೆಚ್ಚ (cost of inflation) ಕಳೆದು ಬಂಡವಾಳ ಗಳಿಕೆ ತೆರಿಗೆ ತುಂಬಬೇಕಾಗುತ್ತದೆ. ಈಗ ಯಾವ ತೆರಿಗೆಯೂ ಬರುವುದಿಲ್ಲ.

***

ಸೋಮಶೇಖರ, ಬೆಂಗಳೂರು

ನನ್ನ ಗೆಳೆಯರಿಗೆ ಸಾಲ ಪಡೆಯಲು ಬ್ಯಾಂಕ್‌ನಲ್ಲಿ ಜಾಮೀನು ಹಾಕಿದ್ದೇನೆ. ಗೆಳೆಯ ಸರ್ಕಾರಿ ನೌಕರ. 19 ವರ್ಷ ಸೇವೆ ಸಲ್ಲಿಸಿ ಸದ್ಯ ಕೆಲಸಕ್ಕೆ ಹೋಗುತ್ತಿಲ್ಲ. ಆತನನ್ನು ಕೆಲಸದಿಂದ ವಜಾ ಮಾಡುತ್ತಾರೆ ಎನ್ನುವ ಸುದ್ದಿ ಇದೆ. ಆತ ಸಾಲ ಮರುಪಾವತಿಸದೇ ಇರುವುದರಿಂದ ಬ್ಯಾಂಕ್‌ನವರು ಆತನಿಗೂ, ನನಗೂ ನೋಟಿಸ್‌ ಕೊಟ್ಟಿರುತ್ತಾರೆ. ನನ್ನ ಗೆಳೆಯನಿಗೆ ಕೆಲಸದಿಂದ ವಜಾ ಮಾಡಿದರೆ, ಆತನಿಗೆ ಬರುವ ನಿವೃತ್ತಿ ಸವಲತ್ತು, ಬ್ಯಾಂಕ್‌ನವರು ಮುಟ್ಟುಗೋಲು ಹಾಕಿ ಸಾಲ ತೀರುವಂತೆ ಮಾಡಲು ನಿಮ್ಮ ಸಲಹೆ ಬೇಕಾಗಿದೆ.

ಉತ್ತರ: ಯಾವುದೇ ವ್ಯಕ್ತಿ ನೌಕರಿಯಿಂದ ವಜಾ ಆಗುವ ಸಂದರ್ಭದಲ್ಲಿ ಆತನಿಗೆ ನಿವೃತ್ತಿಯಿಂದ ಬರುವ ಯಾವುದೇ ಸವಲತ್ತು ದೊರೆಯುವುದಿಲ್ಲ. ಇದೇ ವೇಳೆ ಪಿಎಫ್‌ ಅಥವಾ ಎನ್‌ಪಿಎಸ್‌ಗೆ ಆತ ಕೊಟ್ಟ ಹಣ ಮಾತ್ರ ಆತನಿಗೆ ಬರುತ್ತದೆ. ನೀವು ನಿಮ್ಮ ಗೆಳೆಯನಿಗೆ ಕೆಲಸದಿಂದ ವಜಾ ಆಗದಂತೆ ನೋಡಿಕೊಂಡು, ಸ್ವಯಂ ನಿವೃತ್ತಿಯಿಂದ ಹೊರಬರಲು ಯಾವುದಾದರೂ ಮಾರ್ಗ ಇದ್ದರೆ ಪ್ರಯತ್ನಿಸಿ. ಹೀಗಾದಲ್ಲಿ ನಿವೃತ್ತಿಯಿಂದ ಬರುವ ಹಣವನ್ನು ಆತ ಪಡೆಯಬಹುದು. ನೀವು ತಕ್ಷಣ ವಕೀಲರ ಮೂಲಕ ನಿಮ್ಮ ನೋಟಿಸ್‌ಗೆ ಉತ್ತರವಾಗಿ ಸಾಲಗಾರನಿಗೆ ನೌಕರಿಯಿಂದ ಬರುವ ಹಣವನ್ನು ಕೋರ್ಟ್‌ ಮೂಲಕ ಅಟ್ಯಾಚ್‌ಮೆಂಟ್ ಮಾಡಲು ತಿಳಿಸಿ. ಜಾಮೀನುದಾರರು ಮುಖ್ಯವಾಗಿ ಗಮನಿಸಬೇಕಾದ ವಿಚಾರ ಎಂದರೆ, ಸಾಲ ಪಡೆದ ವ್ಯಕ್ತಿ ಸಾಲ ಹಿಂತಿರುಗಿಸಲು ಅಸಹಾಯಕನಾದಲ್ಲಿ ಸಾಲ ಕೊಟ್ಟ ಸಂಸ್ಥೆಯು ಜಾಮೀನುದಾರರಿಂದಲೇ ಸಾಲ ವಸೂಲಿ ಮಾಡುತ್ತದೆ. ಜಾಮೀನು ಸಾಕ್ಷಿ ಅಲ್ಲ. ಯಾರಿಗಾದರೂ ಜಾಮೀನು ಹಾಕುವಾಗ ಜಾಗ್ರತೆ ವಹಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.