ADVERTISEMENT

ಪ್ರಶ್ನೋತ್ತರ

ಯು.ಪಿ.ಪುರಾಣಿಕ್
Published 15 ಜನವರಿ 2019, 19:30 IST
Last Updated 15 ಜನವರಿ 2019, 19:30 IST
ಯು ಪಿ ಪುರಾಣಿಕ್‌
ಯು ಪಿ ಪುರಾಣಿಕ್‌   

ಸುಜಾತ, ಬೆಂಗಳೂರು

ನಾನು ಅನುವಂಶಿಕವಾಗಿ ಬಂದಿರುವ ಕೃಷಿ ಜಮೀನು ಮಾರಾಟ ಮಾಡಿದ್ದೇನೆ. ಇದರಿಂದ ₹ 2.5 ಕೋಟಿ ಬಂದಿದೆ. ಮಾರಾಟ ಮಾಡುವಾಗ ಶೇ 1 ಅಂದರೆ ₹ 2.5 ಲಕ್ಷ ಟಿಡಿಎಸ್‌ ಮಾಡಿದ್ದಾರೆ. ಇದು ಏತಕ್ಕಾಗಿ ತಿಳಿಸಿ. ಇದಲ್ಲದೆ ಬಂಡವಾಳ ಗಳಿಕೆ ತೆರಿಗೆ (capital gain tax) ತುಂಬಬೇಕೇ ತಿಳಿಸಿ. ಎಲ್ಲಾ ರೀತಿಯಲ್ಲಿ ತೆರಿಗೆ ಉಳಿಸಲು ಸಲಹೆ ನೀಡಿ. ಬಂದ ಹಣ ಕುಟುಂಬದ ಸದಸ್ಯರ ಹೆಸರಿನಲ್ಲಿ ಠೇವಣಿ ಇರಿಸಬಹುದೇ?

ಉತ್ತರ: ಬಂಡವಾಳ ಗಳಿಕೆ ತೆರಿಗೆ (capital gain tax) ಕಾಯ್ದೆ ಸೆಕ್ಷನ್ 48ರ ಆಧಾರದ ಮೇಲೆ ಗ್ರಾಮಾಂತರ ಪ್ರದೇಶದ ಕೃಷಿ ಜಮೀನು ಮಾರಾಟ ಮಾಡಿ ಬರುವ ಲಾಭಕ್ಕೆ ಆದಾಯ ತೆರಿಗೆ ಅಥವಾ ಬಂಡವಾಳ ವೃದ್ಧಿ ತೆರಿಗೆಗೆ (capital gain tax) ಸಂಪೂರ್ಣ ವಿನಾಯ್ತಿ ಇದೆ. ಅಂತಹ ಕೃಷಿ ಜಮೀನು ಸಮೀಪದ ಪಟ್ಟಣದಿಂದ 8 ಕಿ.ಮೀ ದೂರದೊಳಗೆ ಇರುವಲ್ಲಿ ಮಾತ್ರ ಸೆಕ್ಷನ್‌ 2 (14) (iii) (a) ಆಧಾರದ ಮೇಲೆ ಬಂಡವಾಳ ವೃದ್ಧಿ ತೆರಿಗೆ ಕೂಡಬೇಕಾಗುತ್ತದೆ.

ADVERTISEMENT

ನೀವು ಕೊಟ್ಟಿರುವ ಟಿಡಿಎಸ್‌ ಹಣ ಶೇ 1, ಆದಾಯ ತೆರಿಗೆ ರಿಟರ್ನ್‌ ತುಂಬುವಾಗ ವಿವರಣೆ ನೀಡಿ ಹಿಂದಕ್ಕೆ ಪಡೆಯಬಹುದು. ಯಾವುದೇ ಸ್ಥಿರ ಆಸ್ತಿ ₹ 50 ಲಕ್ಷಕ್ಕೂ ಹೆಚ್ಚಿನ ಮೊತ್ತಕ್ಕೆ ನೋಂದಣಿಯಾಗುವಾಗ ಶೇ 1 ರಷ್ಟು ಮೂಲದಲ್ಲೇ ತೆರಿಗೆ ಕಡಿತ (ಟಿಡಿಎಸ್‌) ಮಾಡುವುದು ತೆರಿಗೆ ಕಾನೂನಿಗೆ ಒಳಪಟ್ಟಿದೆ.

ಜಮೀನು ಮಾರಾಟ ಮಾಡಿ ಬಂದಿರುವ ಹಣವನ್ನು ನಿಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ಠೇವಣಿ ಮಾಡಬಹುದು. ಜಮೀನು ಅನುವಂಶಿಕವಾಗಿದ್ದು, ಜಮೀನಿನ ಮೇಲಿನ ಹಕ್ಕು ಕುಟುಂಬದವರಿಗೆ ಇರುವುದರಿಂದ ಇದು ಸರಿಯಾದ ಮಾರ್ಗ.

ಸದ್ಯಕ್ಕೆ ಯಾವ ತೆರಿಗೆಯೂ ನಿಮಗೆ ಬರಲಾರದು. ಮುಂದೆ ಸದಸ್ಯರ ಹೆಸರಿನಲ್ಲಿಡುವ ಠೇವಣಿಯ ಮೇಲಿನ ಬಡ್ಡಿ ಅವರವರ ವಯಸ್ಸಿಗೆ ಅನುಗುಣವಾಗಿ ಮಿತಿ ದಾಟಿದಲ್ಲಿ, (ಹಿರಿಯ ನಾಗರಿಕರಿಗೆ ₹ 3 ಲಕ್ಷ, ಉಳಿದವರಿಗೆ ₹ 2.50 ಲಕ್ಷ) ಹಾಗೆ ದಾಟಿದ ಮೊತ್ತಕ್ಕೆ ತೆರಿಗೆ ಕೂಡಬೇಕಾಗುತ್ತದೆ. ತೆರಿಗೆ ಉಳಿಸಲು ವಾರ್ಷಿಕ ಗರಿಷ್ಠ ₹ 1.50 ಲಕ್ಷಗಳ ತನಕ ಬ್ಯಾಂಕ್‌ ಠೇವಣಿ 5 ವರ್ಷಗಳ ಅವಧಿಗೆ ಮಾಡಿ, ಒಟ್ಟು ಬಡ್ಡಿಯಲ್ಲಿ ಕಳೆಯಬಹುದು. ಕಮಿಷನ್‌, ದೊಡ್ಡವರಮಾನ, ಉಡುಗೊರೆ ಆಸೆಯಿಂದ ಎಂದಿಗೂ ಅಭದ್ರವಾದ ಹೂಡಿಕೆ ಮಾಡಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.