ADVERTISEMENT

ಗ್ರಾಹಕರ ಕೈ ಸುಡುತ್ತಿರುವ ಕಾಯಿಪಲ್ಲ್ಯೆ ದರ

ಮಾರುಕಟ್ಟೆಗೆ ಆವಕ ಇಳಿಕೆ; ಸೊಪ್ಪುಗಳ ಬೆಲೆಯೂ ದುಬಾರಿ

ಚಂದ್ರಶೇಖರ ಕೊಳೇಕರ
Published 18 ಏಪ್ರಿಲ್ 2019, 19:49 IST
Last Updated 18 ಏಪ್ರಿಲ್ 2019, 19:49 IST
ನಿಡಗುಂದಿ ಮಾರುಕಟ್ಟೆಯ ದೃಶ್ಯ
ನಿಡಗುಂದಿ ಮಾರುಕಟ್ಟೆಯ ದೃಶ್ಯ   

ನಿಡಗುಂದಿ: ಕಡು ಬೇಸಿಗೆ. ಅಂತರ್ಜಲ, ನೀರಿನ ಅಭಾವದಿಂದ ತರಕಾರಿ ಆವಕ ಕಡಿಮೆಯಾಗಿದೆ. ಮದುವೆಯ ಸೀಝನ್‌ ಆರಂಭವಾಗಿದ್ದು, ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಇದರಿಂದ ನಿತ್ಯ ಬಳಕೆಯ ಹಸಿರು ತರಕಾರಿ ಬೆಲೆ ಏರಿಕೆಯಾಗುತ್ತಿದ್ದು; ಸೊಪ್ಪು ಗಗನಮುಖಿಯಾಗಿದೆ.

15 ದಿನಗಳಿಂದಲೂ ಪಟ್ಟಣ ಹಾಗೂ ಆಲಮಟ್ಟಿಯ ಮಾರುಕಟ್ಟೆಗೆ ತರಕಾರಿ ಆವಕ ದಿನೇ ದಿನೇ ಇಳಿಕೆಯಾಗುತ್ತಿದ್ದು, ಇದರಿಂದ ಹಸಿರು ತರಕಾರಿ–ಸೊಪ್ಪಿನ ಚಿಕ್ಕ ಸೂಡೊಂದಕ್ಕೆ ₹ 10 ರಿಂದ ₹ 15ಕ್ಕೆ ಏರಿಕೆಯಾಗಿದೆ.

ಕೆಲ ದಿನದ ಹಿಂದೆಯಷ್ಟೇ ₹ 5ಕ್ಕೆ ಒಂದು ಸೂಡು ಸಿಗುತ್ತಿದ್ದ, ರಾಜಗಿರಿ, ಕಿರ್ಕಸಾಲಿ, ಸಬ್ಬಸಗಿ, ಪಾಲಕ್‌, ಹುಣಸೀಕಿ, ಪುದಿನಾ, ಪುಂಡಿ ಪಲ್ಲೆ ಸೇರಿದಂತೆ ಪ್ರತಿಯೊಂದು ತಪ್ಪಲು ಪಲ್ಲೆ ಗಾತ್ರಕ್ಕೆ ಅನುಗುಣವಾಗಿ ₹ 10ರಿಂದ ₹ 15ಕ್ಕೆ ಏರಿಕೆಯಾಗಿದೆ. ಮೆಂತ್ಯಪಲ್ಲೆ, ಕೊತ್ತಂಬರಿಯಂತೂ ಸೂಡಿಗೆ ₹ 15ರ ಕೆಳಕ್ಕೆ ಇಳಿಯುತ್ತಿಲ್ಲ.

ADVERTISEMENT

ಖಾರವಾದ ಮೆಣಸಿನಕಾಯಿ: ಕಳೆದ ಕೆಲ ದಿನಗಳಿಂದಲೂ ಖಾರವಾಗಿರುವ ಹಸಿ ಮೆಣಸಿನಕಾಯಿ ಬೆಲೆ ಇನ್ನೂ ಇಳಿದಿಲ್ಲ. ಅದು ಕೂಡಾ ಕೆ.ಜಿ.ಗೆ ₹ 80ರಿಂದ ₹ 100ಕ್ಕೆ ಮಾರಾಟವಾಗುತ್ತಿದೆ. ಇದೇ ಬೆಲೆಯಲ್ಲಿ ಚವಳಿಕಾಯಿ, ಹಿರೇಕಾಯಿ, ಡೊಣ್ಣ ಮೆಣಸಿನಕಾಯಿ, ಬೆಂಡೆಕಾಯಿಯೂ ಮಾರಾಟವಾಗುತ್ತಿದೆ.

ಟೊಮೆಟೊ ಕೆ.ಜಿ.ಗೆ ₹ 25 ಇತ್ತು. ಹಲ ದಿನಗಳಿಂದ ಬೆಲೆ ಏರುಮುಖ ಕಾಣದ ಈರುಳ್ಳಿಯ ಧಾರಣೆ ಈಗಲೂ ಕೆ.ಜಿ.ಗೆ ₹ 15 ಇದೆ. ನಿಂಬೆಹಣ್ಣು ಮಾತ್ರ ಒಂದಕ್ಕೆ ₹ 2ರಿಂದ ₹ 3 ದರವಿತ್ತು.

‘ನಿತ್ಯ ಬೆಳಿಗ್ಗೆ ಹಳ್ಳಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ತರಕಾರಿ ತಂದು ಪಟ್ಟಣದಲ್ಲಿ ಮಾರುತ್ತಾರೆ. ಆಗ ಬೆಲೆಯ ಜಗ್ಗಾಟ ಸಾಮಾನ್ಯವಾಗಿರುತ್ತದೆ. ಆಗ ಸ್ವಲ್ಪ ಸೋವಿಯಾಗಿ (ಕಡಿಮೆ ಬೆಲೆಯಲ್ಲಿ) ತರಕಾರಿ ಸಿಗುತ್ತಿತ್ತು, ಆದರೆ 15 ದಿನದಿಂದಲೂ ಹಳ್ಳಿಯ ರೈತರು ಕೂಡಾ ಮಾರಾಟಕ್ಕೆ ತರಕಾರಿ ತರುತ್ತಿಲ್ಲ. ಅನಿವಾರ್ಯವಾಗಿ ಬಾಗವಾನರ ಬಳಿಯೇ ಖರೀದಿಸಬೇಕಾಗಿದೆ’ ಎಂದವರು ಗ್ರಾಹಕ ಆರ್.ಜಿ.ಬುಲಾತಿ.

ಮದುವೆ ಸೀಝನ್‌ ಕಾರಣ: ‘ಬಿರು ಬಿಸಲಿಗೆ, ನೀರಿನ ಅಭಾವದ ಕಾರಣ ಗ್ರಾಮೀಣ ಭಾಗದಲ್ಲಿ ತರಕಾರಿ ಬೆಳೆಯುವುದು ಕಡಿಮೆಯಾಗಿದೆ. ಈಗ ಮುಂಗಾರು ಹಂಗಾಮಿಗೆ ಹೊಲ, ಗದ್ದೆ ಸಿದ್ಧಗೊಳಿಸುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಹೊಲಗಳಲ್ಲಿ ಯಾವುದೇ ಬೆಳೆಯನ್ನು ಬೆಳೆಯುತ್ತಿಲ್ಲ. ಅಲ್ಲದೇ ಮದುವೆ ಸೀಝನ್‌ ಆರಂಭಗೊಂಡಿದ್ದರಿಂದ ತರಕಾರಿ ಅಭಾವ ಉಂಟಾಗಿದೆ. ಒಂದೆಡೆ ತರಕಾರಿ ಆವಕ ಕಡಿಮೆಯಿದ್ದು, ಇನ್ನೊಂದೆಡೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಬೆಲೆ ಏರಿಕೆ ಅನಿವಾರ್ಯ, ಇದು ಮುಂದಿನ ಜೂನ್‌ವರೆಗೂ ಇನ್ನಷ್ಟು ಏರಿಕೆಯಾದರೂ ಅಚ್ಚರಿಪಡಬೇಕಿಲ್ಲ’ ಎನ್ನುತ್ತಾರೆ ತರಕಾರಿ ಸಗಟು ವ್ಯಾಪಾರಸ್ಥ ಬೇನಾಳದ ಅಲ್ಲಾಬಕ್ಷ ಬಾಗೇವಾಡಿ.

‘ಇಲ್ಲಿ ತರಕಾರಿಗೆ ಬೇಡಿಕೆ ಹೆಚ್ಚಿದ್ದರಿಂದ, ವಿಜಯಪುರ, ಬಾಗಲಕೋಟೆ ಎಪಿಎಂಸಿಯಿಂದ ಖರೀದಿಸಿ ತಂದು ಮಾರುತ್ತೇವೆ. ಈಗ ಅಲ್ಲಿಯೂ ಹೆಚ್ಚಿನ ಆವಕ ಆಗುತ್ತಿಲ್ಲ, ಅದಕ್ಕಾಗಿ ಬೆಳಗಾವಿಗೆ ತೆರಳಿ ತರಕಾರಿ ಖರೀದಿಸಿ ತರುತ್ತೇವೆ, ಸಾರಿಗೆ ವೆಚ್ಚ ಇವೆಲ್ಲವನ್ನು ಪರಿಗಣಿಸಿದ ಕಾರಣ ಬೆಲೆ ಏರಿಕೆ ಅನಿವಾರ್ಯ’ ಎಂದವರು ಇನ್ನೊಬ್ಬ ವ್ಯಾಪಾರಿ ಹುಸೇನಸಾಬ್‌ ಹಳ್ಳದಮನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.