ADVERTISEMENT

ಪಿಎಫ್‌: ಉದ್ಯೋಗಿ ವಂತಿಗೆ ಕಡಿತ?

ಸಾಮಾಜಿಕ ಸುರಕ್ಷತಾ ಸಂಹಿತೆ ಮಸೂದೆಯಲ್ಲಿ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 5:52 IST
Last Updated 13 ಡಿಸೆಂಬರ್ 2019, 5:52 IST
ಇಪಿಎಫ್‌ಒ
ಇಪಿಎಫ್‌ಒ   

ನವದೆಹಲಿ: ಭವಿಷ್ಯ ನಿಧಿಗೆ (ಪಿಎಫ್‌) ಪ್ರತಿ ತಿಂಗಳೂ ತಾವು ಪಾವತಿಸುವ ವಂತಿಗೆಯನ್ನು ಕಡಿಮೆ ಮಾಡಿ ಮನೆಗೆ ಹೆಚ್ಚು ಸಂಬಳ ತೆಗೆದುಕೊಂಡು ಹೋಗುವ ಆಯ್ಕೆ ಅವಕಾಶವನ್ನು ಉದ್ಯೋಗಿಗಳು ಸದ್ಯದಲ್ಲೇ ಪಡೆದುಕೊಳ್ಳಲಿದ್ದಾರೆ.

ಮೂಲವೇತನದ ಶೇ 12ರಷ್ಟು ಮೊತ್ತವನ್ನು ‘ಪಿಎಫ್‌ಗೆ’ ಶಾಸನಬದ್ಧವಾಗಿ ವಂತಿಗೆ ಸಲ್ಲಿಸುವುದನ್ನು ಶೇ 9ರವರೆಗೆ ಕಡಿಮೆ ಮಾಡಲು ಉದ್ಯೋಗಿಗಳಿಗೆ ಆಯ್ಕೆ ಅವಕಾಶ ಒದಗಿಸುವುದು ಕೇಂದ್ರ ಕಾರ್ಮಿಕ ಇಲಾಖೆಯ ಉದ್ದೇಶವಾಗಿದೆ.

ಮನೆಗೆ ತೆಗೆದುಕೊಂಡು ಹೋಗುವ ಸಂಬಳ ಹೆಚ್ಚಿಸುವುದರಿಂದ ಉದ್ಯೋಗಿಗಳ ವೆಚ್ಚ ಮಾಡುವ ಸಾಮರ್ಥ್ಯ ಹೆಚ್ಚಳಗೊಳ್ಳಲಿದೆ. ಇದರಿಂದ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚಳಗೊಂಡು ಆರ್ಥಿಕತೆಗೆ ಚೇತರಿಕೆ ದೊರೆಯಲಿದೆ ಎನ್ನುವ ಚಿಂತನೆಯು ಈ ಪ್ರಸ್ತಾವದ ಹಿಂದೆ ಇದೆ.

ADVERTISEMENT

ಈ ಪ್ರಸ್ತಾವ ಒಳಗೊಂಡಿರುವ ‘ಸಾಮಾಜಿಕ ಸುರಕ್ಷತಾ ಸಂಹಿತೆ ಮಸೂದೆ–2019’ ಅನ್ನು ಶೀಘ್ರದಲ್ಲಿಯೇ ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆ ಇದೆ. ಮಾಲೀಕರ ವಂತಿಗೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕೇಂದ್ರ ಸಚಿವ ಸಂಪುಟವು ಈಗಾಗಲೇ ಈ ಮಸೂದೆಗೆ ಸಮ್ಮತಿ ನೀಡಿದೆ.

ಸದ್ಯಕ್ಕೆ ಮೂಲ ವೇತನದ ಶೇ 12ರಷ್ಟನ್ನು ಉದ್ಯೋಗಿಗಳು ಮತ್ತು ಮಾಲೀಕರು ಪ್ರತಿ ತಿಂಗಳೂ ಪ್ರತ್ಯೇಕವಾಗಿ ಭವಿಷ್ಯ ನಿಧಿಗೆ ಕಡ್ಡಾಯವಾಗಿ ಪಾವತಿಸುವ ವ್ಯವಸ್ಥೆ ಜಾರಿಯಲ್ಲಿದೆ. ಉದ್ಯೋಗಿಗಳ ತಿಂಗಳ ವಂತಿಗೆ ಕಡಿಮೆಯಾದರೆ ದೀರ್ಘಾವಧಿಯಲ್ಲಿ ಅವರ ‘ಪಿಎಫ್‌’ ಉಳಿತಾಯವೂ ಕಡಿಮೆಯಾಗುವ ಅಪಾಯ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.