ಬೆಂಗಳೂರು: ಪುರವಂಕರ ಗ್ರೂಪ್‌ನ ಪ್ರಾವಿಡೆಂಟ್ ಹೌಸಿಂಗ್ ಲಿಮಿಟೆಡ್ ಗುರುವಾರ 2023–24ನೇ ಸಾಲಿನ ಇಎಸ್‌ಜಿ (ಪರಿಸರ, ಸಾಮಾಜಿಕ ಮತ್ತು ಆಡಳಿತ) ವರದಿಯನ್ನು ಬಿಡುಗಡೆ ಮಾಡಿದೆ.
‘ರಾಜ್ಯ ಸರ್ಕಾರದ ಇಎಸ್‌ಜಿ ಆಶಯ ಈಡೇರಿಸುವಲ್ಲಿ ಕಂಪನಿಯು ಯಶಸ್ವಿಯಾಗಿದೆ. 1.37 ಲಕ್ಷ ಕಿಲೋಲೀಟರ್ ಮಳೆ ನೀರು ಸಂಗ್ರಹ ಮಾಡಿದೆ. 1.18 ಲಕ್ಷ ಕ್ಯೂಬಿಕ್ ಮೀಟರ್‌ನಷ್ಟು ಎಂ–ಸ್ಯಾಂಡ್ ಬಳಸಿದೆ. 254 ಲಾರಿ ಲೋಡ್‌ನಷ್ಟು ಕಟ್ಟಡದ ತ್ಯಾಜ್ಯವನ್ನು ಮರುಬಳಕೆ ಮಾಡಿದೆ’ ಎಂದು ಕಂಪನಿಯ ಸಿಇಒ ಮಲ್ಲಣ್ಣ ಸಾಸಲು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗ್ರಾಹಕರ ಸಂತೃಪ್ತಿಯೇ ಕಂಪನಿಯ ಧ್ಯೇಯ. ಅವರಿಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲು ಒತ್ತು ನೀಡಲಾಗಿದೆ. ಗ್ರಾಹಕರ ಸಂತೃಪ್ತಿಯಲ್ಲಿ ಶೇ 97.31ರಷ್ಟು ಗುರಿ ಸಾಧನೆಯಾಗಿದೆ ಎಂದರು.
ಸುಸ್ಥಿರ ಅಭಿವೃದ್ಧಿಯ ಜೊತೆಗೆ ಉದ್ಯೋಗಿಗಳಿಗೆ ಸೂಕ್ತ ತರಬೇತಿ ನೀಡಲಾಗುತ್ತದೆ. ಗ್ರಾಹಕರ ದೂರುಗಳಿಗೆ ತಕ್ಷಣವೇ ಸ್ಪಂದಿಸುವ ವ್ಯವಸ್ಥೆ ರೂಪಿಸಲಾಗಿದೆ. ದೂರು ಸ್ವೀಕರಿಸಿದ 24 ಗಂಟೆಯೊಳಗೆ ಸ್ಪಂದಿಸಲಾಗುತ್ತದೆ. 48 ಗಂಟೆಯೊಳಗೆ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ವಿವರಿಸಿದರು.
ಪರಿಸರ ಸ್ನೇಹಿ ವಸತಿ ಯೋಜನೆಗಳ ಅಭಿವೃದ್ಧಿಯೇ ಕಂಪನಿಯ ಗುರಿಯಾಗಿದೆ. ಸಕಾಲದಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲಾಗುತ್ತಿದೆ. 2030ರ ವೇಳೆ ಇಎಸ್‌ಜಿ ಅಡಿ ಹಲವು ಗುರಿಗಳನ್ನು ಹೊಂದಲಾಗಿದೆ. ವಿಶ್ವಸಂಸ್ಥೆ ನಿಗದಿಪಡಿಸಿರುವ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು ಒತ್ತು ನೀಡಲಾಗುವುದು ಎಂದು ಹೇಳಿದರು.
ಬೆಂಗಳೂರು ಸೇರಿ ದೇಶದ ಒಂಬತ್ತು ನಗರಗಳಲ್ಲಿ ಸುಮಾರು 20 ದಶಲಕ್ಷ ಚದರ ಅಡಿಯಷ್ಟು ವಸತಿ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಪೈಕಿ 12.8 ದಶಲಕ್ಷ ಚದರ ಅಡಿ ಪ್ರದೇಶವನ್ನು ಗ್ರಾಹಕರಿಗೆ ವಿತರಿಸಲಾಗಿದೆ. 7.2 ದಶಲಕ್ಷ ಚದರ ಅಡಿಯಷ್ಟು ಪ್ರದೇಶದ ಅಭಿವೃದ್ಧಿ ಪ್ರಗತಿಯಲ್ಲಿದೆ. ಕಂಪನಿಯು 12,500 ಮನೆಗಳನ್ನು ನಿರ್ಮಿಸುವ ಮೂಲಕ 50 ಸಾವಿರಕ್ಕೂ ಹೆಚ್ಚು ಜನರಿಗೆ ವಸತಿ ಸೌಲಭ್ಯ ಕಲ್ಪಿಸಿದೆ ಎಂದು ಮಾಹಿತಿ ನೀಡಿದರು.
ಕೈಗೆಟಕುವ ಬೆಲೆ:
ಐದು ವರ್ಷದ ಹಿಂದೆ ಕೈಗೆಟಕುವ ಮನೆಯ ಬೆಲೆಯು ₹45 ಲಕ್ಷ ಇತ್ತು. ಸದ್ಯ ದೇಶದಲ್ಲಿ ಚಿಲ್ಲರೆ ಹಣದುಬ್ಬರ ಏರಿಕೆಯಾಗಿದೆ. ಹಾಗಾಗಿ, ಈ ಮಾದರಿ ಮನೆಯ ಬೆಲೆ ₹75 ಲಕ್ಷಕ್ಕೆ ಮುಟ್ಟಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಕರ್ನಾಟಕದ ಟೈರ್ 1 ಮತ್ತು ಟೈರ್ 2 ನಗರಗಳಲ್ಲಿ ಕಂಪನಿಯಿಂದ ವಸತಿ ಪ್ರದೇಶಗಳನ್ನು ಅಭಿವೃದ್ಧಿಪಡಿಸಿಲ್ಲ. ಸ್ಥಳೀಯ ಬಿಲ್ಡರ್‌ಗಳ ಜೊತೆಗೆ ಕಂಪನಿಯು ಸ್ಪರ್ಧೆಗೆ ಇಳಿದರೆ ಲಾಭ ದಕ್ಕುವುದಿಲ್ಲ. ಕನಿಷ್ಠ ₹600 ಕೋಟಿಗೂ ಹೆಚ್ಚು ಮೌಲ್ಯದ ಯೋಜನೆಗಳನ್ನು ರೂಪಿಸಿದರಷ್ಟೇ ಕಂಪನಿಗೆ ಲಾಭವಾಗಲಿದೆ. ಹಾಗಾಗಿ, ಬೆಳಗಾವಿ, ತುಮಕೂರು ಸೇರಿ ಇತರೆ ನಗರಗಳಲ್ಲಿ ವಸತಿ ಪ್ರದೇಶಗಳ ಅಭಿವೃದ್ಧಿಗೆ ಕಂಪನಿಯು ಮುಂದಾಗುತ್ತಿಲ್ಲ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.