ADVERTISEMENT

12 ಬ್ಯಾಂಕ್‌ಗಳಿಗೆ ಕೇಂದ್ರದಿಂದ ₹ 48 ಸಾವಿರ ಕೋಟಿ ನೆರವು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 18:41 IST
Last Updated 20 ಫೆಬ್ರುವರಿ 2019, 18:41 IST
   

ನವದೆಹಲಿ: ಸರ್ಕಾರಿ ಸ್ವಾಮ್ಯದ 12 ಬ್ಯಾಂಕ್‌ಗಳಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿಯೇ ₹ 48,239 ಕೋಟಿ ಬಂಡವಾಳ ನೀಡುವುದಾಗಿ ಕೇಂದ್ರ ಹಣಕಾಸು ಸಚಿವಾಲಯ ಘೋಷಿಸಿದೆ.

ಅಂತರರಾಷ್ಟ್ರೀಯ ಬ್ಯಾಂಕಿಂಗ್‌ ಮಾನದಂಡ ‘ಬಾಸೆಲ್‌–3’ ನಿಯಮ ಪಾಲನೆಗೆ ಅಗತ್ಯವಾದ ಬಂಡವಾಳ ಹೊಂದಿಸಿಕೊಳ್ಳಲು ಈ ನೆರವು ನೀಡಲಾಗುತ್ತಿದೆ. ಕೇಂದ್ರ ಸರ್ಕಾರ 2018ರ ಡಿಸೆಂಬರ್‌ನಲ್ಲಿ ಬ್ಯಾಂಕ್‌ಗಳಿಗೆ ನೀಡುವ ನೆರವನ್ನು ₹ 41 ಸಾವಿರ ಕೋಟಿಯಷ್ಟು ಹೆಚ್ಚಿಸಿತ್ತು. ಇದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಪುನರ್ಧನದ ಮೊತ್ತ ₹ 65 ಸಾವಿರ ಕೋಟಿಯಿಂದ ₹ 1.06 ಲಕ್ಷ ಕೋಟಿಗೆ ಏರಿಕೆಯಾಗಿದೆ.

‘ಒಟ್ಟಾರೆ ₹ 1.06 ಲಕ್ಷ ಕೋಟಿಯಲ್ಲಿ ಈಗಾಗಲೇ ₹ 1,00,958 ಕೋಟಿ ನೀಡಲಾಗಿದೆ.ಇನ್ನುಳಿದ ₹ 5 ಸಾವಿರ ಕೋಟಿಯನ್ನು ವಿಲೀನದಂತಹ ಅನಿಶ್ಚಿತ ಸಂದರ್ಭಗಳಿಗೆ ಉದಾಹರಣೆಗೆ ದೇನಾ ಮತ್ತು ವಿಜಯ ಬ್ಯಾಂಕ್‌ಗಳನ್ನುಬ್ಯಾಂಕ್‌ ಆಫ್‌ ಬರೋಡಾ ಜತೆ ವಿಲೀನಗೊಳಿಸುವ ಪ್ರಕ್ರಿಯೆಗೆ ಬಳಕೆ ಮಾಡಲಾಗುವುದು’ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್‌ ಕುಮಾರ್ ತಿಳಿಸಿದ್ದಾರೆ.

ADVERTISEMENT

‘ಭಾರತೀಯ ರಿಸರ್ವ್‌ ಬ್ಯಾಂಕ್‌ನ ನಿರ್ಬಂಧಿತ ಕ್ರಮಗಳ ಹೇರಿಕೆಗೆ (ಪಿಸಿಎ) ಒಳಪಟ್ಟಿದ್ದರೂ ಉತ್ತಮ ಸಾಧನೆ ತೋರಿರುವ ಕಾರ್ಪೊರೇಷನ್‌ ಬ್ಯಾಂಕ್‌ಗೆ ₹ 9,086 ಕೋಟಿ, ಅಲಹಾಬಾದ್ ಬ್ಯಾಂಕ್‌ಗೆ ₹6,896 ಕೋಟಿ ಸಿಗಲಿದೆ’ ಎಂದಿದ್ದಾರೆ.

‘ಪಿಸಿಎ’ಯಿಂದ ಮುಕ್ತಿ: ಭಾರತಿ ವಿಶ್ವಾಸ
‘ಕಾರ್ಪೊರೇಷನ್‌ ಬ್ಯಾಂಕ್‌ಗೆ ಹೆಚ್ಚುವರಿಯಾಗಿ ₹ 9,086 ಕೋಟಿ ಬಂಡವಾಳ ನೀಡಲು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಮಾರ್ಚ್‌ ತ್ರೈಮಾಸಿಕದಲ್ಲಿಯೇ ‘ಪಿಸಿಎ’ ನಿಯಮದಿಂದ ಹೊರಬರಲು ಸಾಧ್ಯವಾಗಲಿದೆ’ ಎಂದು ಬ್ಯಾಂಕ್‌ನ ಸಿಇಒ ಪಿ.ವಿ. ಭಾರತಿ ಹೇಳಿದ್ದಾರೆ.

‘ಬ್ಯಾಂಕ್‌ನ ನಿವ್ವಳ ವಸೂಲಾಗದ ಸಾಲದ ಪ್ರಮಾಣವು (ಎನ್‌ಪಿಎ) ಶೇ 6ಕ್ಕಿಂತಲೂ ಕಡಿಮೆ ಇರಲಿದೆ. ಎಸ್ಸಾರ್‌ ಸ್ಟೀಲ್‌, ಸಾಲ ಮರುಪಾವತಿ ಮಾಡದೇ ಇದ್ದರೂ ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ಹೆಚ್ಚುವರಿ ಮೊತ್ತ ತೆಗೆದು ಇರಿಸಲು ಈ ಪುನರ್ಧನ ಬಳಸಿಕೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.