ADVERTISEMENT

ಆರ್ಥಿಕ ಚೇತರಿಕೆಗೆ ಸರ್ಕಾರಿ–ಖಾಸಗಿ ಪಾಲುದಾರಿಕೆ ಅಗತ್ಯ: ಸತ್ಯ ನಾದೆಲ್ಲ

ಪಿಟಿಐ
Published 12 ಡಿಸೆಂಬರ್ 2020, 15:33 IST
Last Updated 12 ಡಿಸೆಂಬರ್ 2020, 15:33 IST
ಸತ್ಯ ನಾದೆಲ್ಲ
ಸತ್ಯ ನಾದೆಲ್ಲ   

ನವದೆಹಲಿ: ‘ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳು ಕೋವಿಡ್‌–19 ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲು ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ವಲಯ ಒಟ್ಟಾಗಿ ಕೆಲಸ ಮಾಡಬೇಕು’ ಎಂದು ಮೈಕ್ರೊಸಾಫ್ಟ್‌ ಸಿಇಒ ಸತ್ಯ ನಾದೆಲ್ಲ ಹೇಳಿದ್ದಾರೆ.

‘ಸರ್ಕಾರಿ, ಖಾಸಗಿ ವಲಯ ಹಾಗೂ ನಾಗರಿಕ ಸಮಾಜದ ಮಧ್ಯೆ ಸಾಮಾಜಿಕ ಒಪ್ಪಂದದ ಅಗತ್ಯವಿದೆ. ಆ ಮೂಲಕ ಬದಲಾವಣೆಗಳಿಗೆ ಹಾದಿಯಾಗಬೇಕಿದೆ’ ಎಂದು ತಿಳಿಸಿದ್ದಾರೆ.

‘ತಂತ್ರಜ್ಞಾನ ಬಳಕೆಯಲ್ಲಿ ಸರ್ಕಾರಿ ವಲಯದ ಸಂಸ್ಥೆಗಳು ಮುಂಚೂಣಿಯಲ್ಲಿ ಇರುವುದು ಬಹಳ ಮುಖ್ಯವಾಗಿದೆ. ಬ್ಯಾಂಕಿಂಗ್‌ ಎಪಿಐ ಅಥವಾ ಪೇಮೆಂಟ್‌ ಎಪಿಐ ರೂಪಿಸುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ’ ಎಂದು ಫಿಕ್ಕಿಯ ವಾರ್ಷಿಕ ಮಹಾಸಭೆಯಲ್ಲಿ ತಿಳಿಸಿದರು.

ADVERTISEMENT

‘ಸರ್ಕಾರಿ ವಲಯಗಳ ಆಧುನೀಕರಣ ಪ್ರಕ್ರಿಯೆಗೆ ಬೆಂಬಲ ನೀಡುವುದನ್ನು ಖಾತರಿಪಡಿಸುವ ಅಗತ್ಯವಿದೆ. ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಸರ್ಕಾರಿ–ಖಾಸಗಿ ಪಾಲುದಾರಿಕೆ ನೆರವಾಗುತ್ತಿದ್ದು, ಇದು ಬಹಳ ಮುಖ್ಯವಾಗಿದೆ. ಸರ್ಕಾರಿ ಮತ್ತು ಖಾಸಗಿ ವಲಯಗಳು ಒಟ್ಟಾಗಿ ಕೆಲಸ ಮಾಡಿದರೆ ಮುಂದಿನ 10 ವರ್ಷಗಳಲ್ಲಿ ಉತ್ತಮ ಬೆಳವಣಿಗೆ ಸಾಧ್ಯವಾಗಲಿದೆ ಎನ್ನುವುದು ನನ್ನ ಭಾವನೆ’ ಎಂದಿದ್ದಾರೆ.

‘ಕೋವಿಡ್‌ ಸಂದರ್ಭದಲ್ಲಿ ಎಲ್ಲಾ ವಲಯಗಳಲ್ಲಿಯೂ ತಂತ್ರಜ್ಞಾನವು ನಿರ್ಣಾಯಕವಾದ ಪಾತ್ರ ವಹಿಸಿದೆ. ಟೆಲಿಮೆಡಿಸಿನ್‌ ಅಳವಡಿಕೆಗೆ ವೇಗ ದೊರೆತಿದೆ. ಸಣ್ಣ ರಿಟೇಲ್‌ ವರ್ತಕರು ಸಹ ತಂತ್ರಜ್ಞಾನ ಬಳಸುತ್ತಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.