ADVERTISEMENT

ಜಿಇಎಂ: ₹9.82 ಲಕ್ಷ ಕೋಟಿ ವಹಿವಾಟು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 13:40 IST
Last Updated 9 ಆಗಸ್ಟ್ 2024, 13:40 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಸರ್ಕಾರದ ಇ–ಮಾರುಕಟ್ಟೆ ಪೋರ್ಟಲ್‌ ಆದ ‘ಜಿಇಎಂ’ ಮೂಲಕ ಪ್ರಸಕ್ತ ವರ್ಷದ ಜುಲೈ ಅಂತ್ಯದವರೆಗೆ ಸರಕು ಮತ್ತು ಸೇವೆಗಳ ವಹಿವಾಟು ಮೌಲ್ಯವು ₹9.82 ಲಕ್ಷ ಕೋಟಿ ದಾಟಿದೆ ಎಂದು ಕೇಂದ್ರ ಸರ್ಕಾರವು, ಶುಕ್ರವಾರ ರಾಜ್ಯಸಭೆಗೆ ತಿಳಿಸಿದೆ.

2016ರ ಆಗಸ್ಟ್‌ 9ರಂದು ಈ ಪೋರ್ಟಲ್‌ ಕಾರ್ಯಾರಂಭ ಮಾಡಿತು. ಸರ್ಕಾರಿ ಕಚೇರಿಗಳು, ಸಾರ್ವಜನಿಕ ವಲಯದ ಉದ್ದಿಮೆಗಳು ಸರಕು ಮತ್ತು ಸೇವೆ ಪಡೆಯಲು ಆನ್‌ಲೈನ್‌ ವೇದಿಕೆಯನ್ನು ಕಲ್ಪಿಸಿದೆ.

‘2016–17ರಲ್ಲಿ ₹422 ಕೋಟಿ ವಹಿವಾಟು ನಡೆದಿತ್ತು. 2023–24ನೇ ಆರ್ಥಿಕ ವರ್ಷದಲ್ಲಿ ವಹಿವಾಟಿನ ಮೌಲ್ಯ ₹4 ಲಕ್ಷ ಕೋಟಿ ದಾಟಿತು’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಜಿತಿನ್ ಪ್ರಸಾದ, ಲಿಖಿತ ಉತ್ತರದಲ್ಲಿ ವಿವರಿಸಿದ್ದಾರೆ.

ಮಹಿಳೆಯರು ನೇತೃತ್ವವಹಿಸಿರುವ 1.63 ಲಕ್ಷ ಅತಿಸಣ್ಣ ಮತ್ತು ಸಣ್ಣ ಉದ್ದಿಮೆಗಳು ಮತ್ತು 25 ಸಾವಿರ ನವೋದ್ಯಮಗಳು ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿವೆ ಎಂದು ತಿಳಿಸಿದ್ದಾರೆ. 

ಸರ್ಕಾರದ ಅಧೀನಕ್ಕೆ ಒಳಪಟ್ಟಿರುವ 63 ಸಾವಿರ ಖರೀದಿದಾರ ಸಂಸ್ಥೆಗಳು, 62 ಲಕ್ಷಕ್ಕೂ ಹೆಚ್ಚು ಮಾರಾಟಗಾರರು ಪೋರ್ಟಲ್‌ನಲ್ಲಿದ್ದಾರೆ. ಕೇಂದ್ರ ಸರ್ಕಾರದ ಇಲಾಖೆಗಳು, ಸಚಿವಾಲಯ, ಸಾರ್ವಜನಿಕ ವಲಯದ ಉದ್ದಿಮೆಗಳು, ರಾಜ್ಯ ಸರ್ಕಾರಗಳು, ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಗಳಿಗೆ ಪೋರ್ಟಲ್‌ ಮೂಲಕ ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.