ADVERTISEMENT

ಪ್ರಶ್ನೋತ್ತರ

ಪುರವಣಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 18:45 IST
Last Updated 20 ಆಗಸ್ಟ್ 2019, 18:45 IST
   

ರಾಮಕೃಷ್ಣ, ಬೆಂಗಳೂರು

ನಾನು 30–4–2019ರಂದು ನಿವೃತ್ತನಾಗಿದ್ದೇನೆ. 10 ತಿಂಗಳ ವೇತನ ನಗದೀಕರಣದಿಂದ ₹ 5 ಲಕ್ಷ ಬಂದಿರುತ್ತದೆ. ಅದನ್ನು ನೀಡುವಾಗಲೂ ₹ 10,800 ಆದಾಯ ತೆರಿಗೆ ಮುರಿದಿದ್ದಾರೆ. ಈ ಮೊತ್ತ Capital Gainನಲ್ಲಿ ಬರುವುದರಿಂದ ತೆರಿಗೆ ಮುರಿದಿರುವುದಾಗಿ ತಿಳಿಸಿದ್ದಾರೆ. ಸರಿಯಾದ ಮಾಹಿತಿ ನೀಡಿ.

ಉತ್ತರ: ಓರ್ವ ವ್ಯಕ್ತಿ ನಿವೃತ್ತಿಯಾಗುವಾಗ ರಜಾ ಸಂಬಳ ನಗದೀಕರಿಸಿದರೆ ಬರುವ ಮೊತ್ತ ಸೆಕ್ಷನ್ 10 (10AA) ಆಧಾರದ ಮೇಲೆ ಗರಿಷ್ಠ ₹ 3 ಲಕ್ಷ ವಿನಾಯ್ತಿ ಪಡೆಯಬಹುದು. ನೀವು ₹ 5 ಲಕ್ಷ ಪಡೆದಿರುವುದರಿಂದ,
₹ 2 ಲಕ್ಷ ವರಮಾನಕ್ಕೆ ₹ 10,800 ಮುರಿದಿರಬೇಕು. ಕ್ಯಾಪಿಟಲ್‌ ಗೇನ್‌ ಅಂದರೆ ಬಂಡವಾಳ ವೃದ್ದಿ ತೆರಿಗೆ. ಇದು ಸ್ಥಿರ ಆಸ್ತಿ, ಬಂಗಾರ, ಷೇರ್‌ಗಳಿಗೆ ಸಂಬಂಧಿಸಿದೆ. ರಜಾ ಸಂಬಳ ನಗದೀಕರಣಕ್ಕೆ ಸಂಬಂಧಿಸಿರುವುದಿಲ್ಲ.

ADVERTISEMENT

ಗುರುಮೂರ್ತಿ ದೇವಪ್ಪ ಹೆಗಡೆ, ಹೊನ್ನೆಗುಂಡಿ, ಸಿದ್ದಾಪುರ. ಉ.ಕ

ನನಗೆ ಪಿತ್ರಾರ್ಜಿತವಾಗಿ 3 ಎಕರೆ ಅಡಿಕೆ ತೋಟ ಬಂದಿದೆ. ನಾನು ಮತ್ತು ನನ್ನ ಹೆಂಡತಿ ಹಿರಿಯ ನಾಗರಿಕರು. ನೀವು ಈ ಅಂಕಣದಲ್ಲಿ ನೀಡುತ್ತಿರುವ ಸಲಹೆಯಂತೆ ಬ್ಯಾಂಕು ಹಾಗೂ ಅಂಚೆ ಕಚೇರಿ ಠೇವಣಿಗಳಲ್ಲಿ ಹಣ ಹೂಡುತ್ತಿದ್ದೇವೆ. ನಿಮ್ಮ ಸಲಹೆಗೆ ನಾವು ಚಿರಋಣಿಗಳು. ನನಗೆ EPFನ Pension ₹ 10,200 ಸೇರಿ ₹ 2.45 ಲಕ್ಷ ಆದಾಯ ಬರಬಹುದು. ಮಕ್ಕಳು ಕೊಟ್ಟ ಹಣದಿಂದ ವಾರ್ಷಿಕ ₹ 2.10 ಲಕ್ಷ ಬರಬಹುದು. ನಾನು I.T. Return ತುಂಬ ಬೇಕೇ ತಿಳಿಸಿರಿ.

ಉತ್ತರ: 1–4–2019ರ ನಂತರ ನಿಮ್ಮ ಆದಾಯಕ್ಕೆ ಆದಾಯ ತೆರಿಗೆ ಬರುವುದಿಲ್ಲ.I.T. Return ತುಂಬುವ ಅವಶ್ಯವಿಲ್ಲ. ಕೃಷಿ ಆದಾಯಕ್ಕೆ ಸೆಕ್ಷನ್ 10(1) ಆಧಾರದ ಮೇಲೆ ಸಂಪೂರ್ಣ ವಿನಾಯ್ತಿ ಇದೆ. ಜನಸಾಮಾನ್ಯರು ಕಷ್ಟಪಟ್ಟು ಗಳಿಸಿ ಉಳಿಸಿದ ಹಣ ಭದ್ರವಾಗಿ ಇರಲಿ, ಅವರ ಆಪತ್ತಿನಲ್ಲಿ ಸಂಪತ್ತಾಗಲಿ ಎನ್ನುವ ದೃಷ್ಟಿಯಿಂದ ಜನರಿಗೆ ಸಲಹೆ ನೀಡುತ್ತಿದ್ದೇನೆ. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು.

‌ಸಂತೋಷ, ಹಂದಿಗನೂರು

ನಾನು ಸರ್ಕಾರಿ ನೌಕರ. ನನ್ನ ಮೂಲವೇತನ₹ 27,400, ಎಚ್.ಆರ್.ಎ.₹ 2,740, ಡಿ.ಎ. 12,399 ಎಲ್ಲಾ ಸೇರಿ₹ 42,539. ಕಡಿತ ಐ.ಟಿ.₹ 200, ಜಿ.ಐ.ಎಸ್.₹ 180, ಕೆ.ಜಿ.ಐ.ಡಿ.₹ 7,000, ಎಲ್.ಐ.ಸಿ.
₹ 4,673. ಮಕ್ಕಳ ಭವಿಷ್ಯಕ್ಕಾಗಿ, ಕುಟುಂಬದ ಏಳಿಗೆಗಾಗಿ, ಆದಾಯ ತೆರಿಗೆ ಉಳಿಸಲು ಹಾಗೂ ಹೊಸ ಪಿಂಚಣಿ ಯೋಜನೆ ಈ ಎಲ್ಲಾ ಕುರಿತಾಗಿ ಮಾಹಿತಿ ನೀಡಿರಿ.

ಉತ್ತರ: ನಿಮ್ಮ ಒಟ್ಟು ವೇತನದಲ್ಲಿ ಕಡಿತ ಹೋಗಿ₹ 30,486 ಉಳಿಯುತ್ತದೆ. ನೀವು ಉಳಿತಾಯಕ್ಕೆ ವಿಮೆಯನ್ನು ಮುಖ್ಯ ವಿಚಾರವಾಗಿ ತೆಗೆದುಕೊಂಡಿದ್ದೀರಿ. ನಿಮ್ಮ ವಯಸ್ಸು ಹಾಗೂ ಮಕ್ಕಳ ವಿಚಾರದಲ್ಲಿ ಯಾವುದೇ ವಿವರ ನೀಡಿಲ್ಲ. 2004ರ ನಂತರ ನೀವು ಕೆಲಸಕ್ಕೆ ಸೇರಿದ್ದರೆ ನಿಮಗೆ ಪಿಂಚಣಿ ಇರಲಾರದು. 1–4–2019 ರಿಂದ ಎಲ್ಲರಿಗೂ ಆದಾಯ ತೆರಿಗೆ ಮಿತಿ₹ 5 ಲಕ್ಷ ನಿಗದಿ ಪಡಿಸಿದ್ದು, ನಿಮ್ಮ ವಿಮಾ ಕಂತು ಒಟ್ಟು ಆದಾಯದಲ್ಲಿ ಕಳೆದಾಗ (ಸೆಕ್ಷನ್ 80c), ನೀವು ತೆರಿಗೆಗೆ ಒಗಾಗುವುದಿಲ್ಲ. ಇದೇ ವೇಳೆ ನೀವು ಬಯಸಿದಂತೆ, ಸೆಕ್ಷನ್ 80 ccd (1B) ಆಧಾರದ ಮೇಲೆ NSSನಲ್ಲಿ ಗರಿಷ್ಠ₹ 50,000 ವಾರ್ಷಿಕವಾಗಿ ಉಳಿಸಿ ಹಾಗೂ ಪಿ.ಪಿ.ಎಫ್. ಖಾತೆ ತೆರೆದು ಎಷ್ಟಾದರಷ್ಟು (ಗರಿಷ್ಠ₹ 1.50 ಲಕ್ಷ) ವಾರ್ಷಿಕವಾಗಿ ತುಂಬಿರಿ. ನಿಮ್ಮ ಹಾಗೂ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ₹ 10,000 ಆರ್.ಡಿ., 10 ವರ್ಷಗಳ ಅವಧಿಗೆ ಮಾಡಿರಿ. 10 ವರ್ಷ ಮುಗಿಯುತ್ತಲೇ ಸಮೀಪದಲ್ಲಿ ₹19 ಲಕ್ಷ ಪಡೆಯುವಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.