ADVERTISEMENT

ವಿರಳ ಲೋಹ: ತಯಾರಿಕೆ ಉತ್ತೇಜನಕ್ಕೆ ಯೋಜನೆ– ಕೇಂದ್ರ ಸಚಿವ ಸಂಪುಟದ ಸಭೆ ಒಪ್ಪಿಗೆ

ಪ್ರಧಾನಿ ಮೋದಿ ನೇತೃತ್ವದ ಸಂಪುಟದಿಂದ ₹7,280 ಕೋಟಿ ಮೊತ್ತದ ಯೋಜನೆಗೆ ಒಪ್ಪಿಗೆ

ಪಿಟಿಐ
Published 26 ನವೆಂಬರ್ 2025, 23:30 IST
Last Updated 26 ನವೆಂಬರ್ 2025, 23:30 IST
   

ನವದೆಹಲಿ: ದೇಶದಲ್ಲಿ ‘ವಿರಳ ಲೋಹದ ಶಾಶ್ವತ ಆಯಸ್ಕಾಂತ’ ತಯಾರಿಕೆಗೆ ಉತ್ತೇಜನ ನೀಡಲು ₹7,280 ಕೋಟಿ ಮೊತ್ತದ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟದ ಸಭೆಯು ಬುಧವಾರ ಒಪ್ಪಿಗೆ ನೀಡಿದೆ.

ಇದು ಚೀನಾ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡಲು ನೆರವಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ವಿರಳ ಲೋಹದ ಶಾಶ್ವತ ಆಯಸ್ಕಾಂತಗಳು ವಿದ್ಯುತ್ ಚಾಲಿತ ವಾಹನ, ನವೀಕರಿಸಬಹುದಾದ ಇಂಧನ, ಎಲೆಕ್ಟ್ರಾನಿಕ್ಸ್, ರಕ್ಷಣಾ ಉಪಕರಣಗಳು ಸೇರಿ ಹಲವು ವಲಯಗಳ ಪಾಲಿಗೆ ಬಹಳ ಮಹತ್ವದವು.

‘ಈ ಯೋಜನೆಯು ವಿರಳ ಲೋಹದ ಶಾಶ್ವತ ಆಯಸ್ಕಾಂತ ತಯಾರಿಕೆಯನ್ನು ಉತ್ತೇಜಿಸಲಿದೆ. ವಾರ್ಷಿಕ ಆರು ಸಾವಿರ ಟನ್‌ನಷ್ಟು ಉತ್ಪಾದನೆಯ ಗುರಿಯನ್ನು ಹೊಂದಲಾಗಿದೆ’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ADVERTISEMENT

ವಿರಳ ಲೋಹದ ಆಕ್ಸೈಡುಗಳನ್ನು ಲೋಹಗಳನ್ನಾಗಿ ಪರಿವರ್ತಿಸುವ, ಲೋಹಗಳನ್ನು ಮಿಶ್ರಲೋಹಗಳನ್ನಾಗಿ ಪರಿವರ್ತಿಸುವ, ಮಿಶ್ರಲೋಹಗಳನ್ನು ಆಯಸ್ಕಾಂತಗಳನ್ನಾಗಿ ಮಾಡುವ ತಯಾರಿಕಾ ಘಟಕಗಳ ಸ್ಥಾಪನೆಗೆ ಈ ಯೋಜನೆಯು ನೆರವು ನೀಡಲಿದೆ.

ಯೋಜನೆಯ ಅಡಿಯಲ್ಲಿ ಒಟ್ಟು ಉತ್ಪಾದನಾ ಗುರಿಯನ್ನು ಐದು ಫಲಾನುಭವಿಗಳಿಗೆ ಹಂಚಿಕೆ ಮಾಡುವ ಉದ್ದೇಶ ಇದೆ. ಇದಕ್ಕಾಗಿ ಜಾಗತಿಕ ಬಿಡ್ ನಡೆಸಲಾಗುತ್ತದೆ. ಪ್ರತಿ ಫಲಾನುಭವಿಗೂ ವಾರ್ಷಿಕ 1,200 ಟನ್‌ ತಯಾರಿಕೆಯ ಗುರಿಯನ್ನು ಹಂಚಿಕೆ ಮಾಡಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಯನ್ನು ಶೀಘ್ರವೇ ಹೊರಡಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಯೋಜನೆಯ ಒಟ್ಟು ಮೊತ್ತವಾದ ₹7,280 ಕೋಟಿಯಲ್ಲಿ ಮಾರಾಟ ಆಧಾರಿತ ಉತ್ತೇಜನ ಮೊತ್ತವಾದ ₹6,450 ಕೋಟಿ ಕೂಡ ಸೇರಿದೆ.

ವಿದ್ಯುತ್ ಚಾಲಿತ ವಾಹನಗಳಿಗೆ, ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸುವ ಇಂಧನಕ್ಕೆ, ಗ್ರಾಹಕ ಬಳಕೆ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಕಾರಣದಿಂದಾಗಿ ದೇಶದಲ್ಲಿ ವಿರಳ ಲೋಹದ ಶಾಶ್ವತ ಆಯಸ್ಕಾಂತಗಳಿಗೆ ಬೇಡಿಕೆಯು 2030ರ ವೇಳೆಗೆ ದುಪ್ಪಟ್ಟಾಗುವ ಅಂದಾಜು ಇದೆ.

ಈಗ ಇವುಗಳನ್ನು ಚೀನಾ ಸೇರಿದಂತೆ ಬೇರೆ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಶಾಶ್ವತ ಆಯಸ್ಕಾಂತಗಳ ಪೂರೈಕೆದಾರ ದೇಶಗಳ ಪೈಕಿ ಚೀನಾ ಬಹಳ ಪ್ರಮುಖವಾಗಿದೆ. ಅದು ಇವುಗಳ ರಫ್ತಿನ ಮೇಲೆ ನಿರ್ಬಂಧ ವಿಧಿಸಿರುವುದರಿಂದಾಗಿ ಭಾರತದ ಆಟೊಮೊಬೈಲ್, ಎಲೆಕ್ಟ್ರಾನಿಕ್ಸ್‌ ಸೇರಿದಂತೆ ಕೆಲವು ವಲಯಗಳಿಗೆ ತೊಂದರೆ ಆಗಿದೆ.

* ಚೀನಾ ಮೇಲಿನ ಅವಲಂಬನೆ ತಗ್ಗಿಸಲು ನೆರವು

* ವಾರ್ಷಿಕ 6 ಸಾವಿರ ಟನ್ ಉತ್ಪಾದನೆಯ ಗುರಿ

* 2030ರ ವೇಳೆಗೆ ಬೇಡಿಕೆ ದುಪ್ಪಟ್ಟಾಗುವ ಅಂದಾಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.