ADVERTISEMENT

ಆರ್ಥಿಕ ಪುನಶ್ಚೇತನಕ್ಕೆ ಆದ್ಯತೆ: ಆರ್‌ಬಿಐ

ವಾರ್ಷಿಕ ವರದಿ ಬಿಡುಗಡೆ: ಹಿಂಜರಿತದ ನಿಖರ ಕಾರಣ ಗುರುತಿಸುವುದು ಸವಾಲು

ಪಿಟಿಐ
Published 29 ಆಗಸ್ಟ್ 2019, 19:38 IST
Last Updated 29 ಆಗಸ್ಟ್ 2019, 19:38 IST
ಆರ್‌ಬಿಐ ಲಾಂಛನ
ಆರ್‌ಬಿಐ ಲಾಂಛನ   

ಮುಂಬೈ: ದೇಶಿ ಆರ್ಥಿಕತೆಯಲ್ಲಿನ ಬೆಳವಣಿಗೆ ಹಿಂಜರಿತಕ್ಕೆ ಕಡಿವಾಣ ವಿಧಿಸಿ ಪುನಶ್ಚೇತನಗೊಳಿಸಲು ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಿಸಲು ಹಾಗೂ ಖಾಸಗಿ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ಉತ್ತೇಜನ ನೀಡಬೇಕಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವೃದ್ಧಿ ದರದಲ್ಲಿನ ಹಿಂಜರಿತದ ನಿಖರ ಕಾರಣಗಳನ್ನು ಗುರುತಿಸುವುದು ಸವಾಲಿನ ಕೆಲಸವಾಗಿದೆ. ಹಿಂಜರಿತವು ಆರ್ಥಿಕತೆಯ ಎಲ್ಲ ವಲಯಗಳಲ್ಲಿನ ತೀವ್ರ ಸ್ವರೂಪದ ಕುಸಿತದ ವಿದ್ಯಮಾನವಾಗಿಲ್ಲ. ಅದೊಂದು, ಆರ್ಥಿಕ ಚಟುವಟಿಕೆಗಳ ಏರಿಳಿತ ಹಂತದ ಕೆಳಮುಖ ಚಲನೆಯಾಗಿದೆಯಷ್ಟೆ. ಅರ್ಥ ವ್ಯವಸ್ಥೆಯಲ್ಲಿನ ಮಂದಗತಿಗೆ ಕಡಿವಾಣ ಹಾಕಿ ಚೇತರಿಕೆಗೆ ಉತ್ತೇಜನ ನೀಡಲು ಉಪಭೋಗ ಮತ್ತು ಖಾಸಗಿ ಹೂಡಿಕೆಗೆ ಗರಿಷ್ಠ ಆದ್ಯತೆ ನೀಡಬೇಕಾಗಿದೆ ಎಂದು ಗುರುವಾರ ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.

ಬ್ಯಾಂಕಿಂಗ್‌ ಮತ್ತು ಬ್ಯಾಂಕೇತರ ಹಣಕಾಸು ವಲಯಗಳ ಬಲವರ್ಧನೆ, ಮೂಲಸೌಕರ್ಯ ವಲಯಗಳಲ್ಲಿ ದೊಡ್ಡ ಮೊತ್ತದ ಬಂಡವಾಳ ಹೂಡಿಕೆ, ತೆರಿಗೆ, ಕಾರ್ಮಿಕ ಕಾಯ್ದೆ ಸುಧಾರಣೆಗಳನ್ನು ತರುವ ಅಗತ್ಯ ಇದೆ. ಆರ್ಥಿಕತೆಯಲ್ಲಿ ಕುಂಠಿತ ಪ್ರಗತಿ ಕಾಣುವುದಕ್ಕೆ ದೇಶಿ ಬೇಡಿಕೆ ಪ್ರಮಾಣ ಕುಗ್ಗಿರುವುದೇ ಪ್ರಮುಖ ಕಾರಣವಾಗಿದೆ. ಇಂತಹ ಸಮಸ್ಯೆಗಳಿಗೆ ಪರ್ಯಾಯವಾಗಿ ಸುಲಲಿತವಾಗಿ ಉದ್ದಿಮೆ ವಹಿವಾಟು ಆರಂಭಿಸಲು ಪೂರಕ ವಾತಾವರಣ ಕಲ್ಪಿಸುವುದು, ಭೂಸ್ವಾಧೀನ ಮತ್ತು ಕಾರ್ಮಿಕ ಕಾಯ್ದೆಗಳಲ್ಲಿ ಸುಧಾರಣೆ ಆಗ ಬೇಕು ಎಂದು ಆರ್‌ಬಿಐ ಪ್ರತಿಪಾದಿಸಿದೆ.

ADVERTISEMENT

ಆರ್ಥಿಕತೆಗೆ ಹಣಕಾಸು ಉತ್ತೇಜನಾ ಕೊಡುಗೆ ನೀಡಬೇಕಾಗಿದೆ ಎನ್ನುವ ವ್ಯಾಪಕ ಬೇಡಿಕೆಗೂ ಕೇಂದ್ರೀಯ ಬ್ಯಾಂಕ್‌ ಸ್ಪಂದಿಸಿದೆ. ಕೃಷಿ ಸಾಲ ಮನ್ನಾ, ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿ ಜಾರಿ, ಆದಾಯ ಹೆಚ್ಚಳದ ಹಲವಾರು ಯೋಜನೆಗಳ ಜಾರಿಯಿಂದಾಗಿ ರಾಜ್ಯ ಸರ್ಕಾರಗಳ ಹಣಕಾಸು ಉತ್ತೇಜನಾ ಕೊಡುಗೆಯ ಸಾಮರ್ಥ್ಯವು ಕಡಿಮೆಯಾಗಿದೆ ಎಂದೂ ಕಾರಣಗಳನ್ನು ಪಟ್ಟಿ ಮಾಡಿದೆ.

ಉತ್ತಮ ಮುಂಗಾರಿನ ಕಾರಣಕ್ಕೆ ಹಣದುಬ್ಬರ ನಿಯಂತ್ರಣ ಮಟ್ಟದಲ್ಲಿ ಇರುವುದು, ವಿತ್ತೀಯ ಕೊರತೆ ಹೆಚ್ಚಳಗೊಳ್ಳದಿರುವುದು, ಚಾಲ್ತಿ ಖಾತೆ ಕೊರತೆ ಅಂತರ ಕೆಳಮಟ್ಟದಲ್ಲಿ ಇರುವುದು ಆರ್ಥಿಕತೆ ಕುರಿತ ಆಶಾಕಿರಣಗಳಾಗಿವೆ. ಅರ್ಥ ವ್ಯವಸ್ಥೆಯ ಬಲಿಷ್ಠ ಆಧಾರ ಸ್ತಂಭಗಳು ಏರಿಳಿತದ ವಿರುದ್ಧ ರಕ್ಷಣೆ ನೀಡಬೇಕಾಗಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ಅನಿರೀಕ್ಷಿತ ವೆಚ್ಚದ ಮೀಸಲು ಮೊತ್ತ ಇಳಿಕೆ

ತುರ್ತು ಅಗತ್ಯಗಳಿಗಾಗಿ ಆರ್‌ಬಿಐ ಬಳಿ ಇರುವ ಮೀಸಲು ನಿಧಿಯ ಮೊತ್ತವು ಈಗ ₹ 1.94 ಲಕ್ಷ ಕೋಟಿಗೆ ಇಳಿದಿದೆ.

ಭವಿಷ್ಯದಲ್ಲಿನ ಅನಿರೀಕ್ಷಿತ ವೆಚ್ಚಗಳಿಗೆ ಮೀಸಲು ಇರಿಸಿದ ನಿಧಿಯಲ್ಲಿನ₹ 52 ಸಾವಿರ ಕೋಟಿಗಳನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸುವುದರಿಂದ ಈ ವರ್ಷದ ಜೂನ್‌ ತಿಂಗಳಾಂತ್ಯಕ್ಕೆ ಮೀಸಲು ನಿಧಿಯಲ್ಲಿ ₹ 1,96,344 ಕೋಟಿ ಉಳಿಯಲಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹ 2,32,108 ಕೋಟಿ ಮೀಸಲು ಇತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಆರ್‌ಬಿಐ ತನ್ನ ಲಾಭದಲ್ಲಿನ ₹ 1,23,000 ಕೋಟಿ ಉಳಿತಾಯವನ್ನೂ ಕೇಂದ್ರ ಸರ್ಕಾರಕ್ಕೆ ಪಾವತಿಸಿದೆ. ಈ ಮೊತ್ತವು ಇತ್ತೀಚಿನ ಪಾವತಿಗಳಲ್ಲಿಯೇ ದುಪ್ಪಟ್ಟು ಪ್ರಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.