ADVERTISEMENT

ಕ್ರೆಡಿಟ್‌ ಕಾರ್ಡ್‌ ವಿತರಣೆಗೆ ಹೊಸ ಮಾರ್ಗಸೂಚಿ

ಪಿಟಿಐ
Published 7 ಮಾರ್ಚ್ 2024, 0:14 IST
Last Updated 7 ಮಾರ್ಚ್ 2024, 0:14 IST
   

ಮುಂಬೈ: ಕ್ರೆಡಿಟ್‌ ಕಾರ್ಡ್‌ಗಳ ವಿತರಣೆಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ಹಾಗೂ ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ (ಎನ್‌ಬಿಎಫ್‌ಸಿ), ಭಾರತೀಯ ರಿಸರ್ವ್‌ ಬ್ಯಾಂಕ್‌ ಬುಧವಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಇದರ ಅನ್ವಯ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ವಿತರಿಸುವ ವೇಳೆ ಅರ್ಹ ಗ್ರಾಹಕರಿಗೆ ಒಂದಕ್ಕಿಂತ ಹೆಚ್ಚು ಕಾರ್ಡ್ ನೆಟ್‌ವರ್ಕ್‌ಗಳ ಆಯ್ಕೆಯನ್ನು ನೀಡುವುದು ಕಡ್ಡಾಯವಾಗಿದೆ. ಇದರಿಂದ ಗ್ರಾಹಕರು ತಾವು ಇಚ್ಛಿಸಿದ ನೆಟ್‌ವರ್ಕ್‌ನಿಂದ ಕಾರ್ಡ್ ಪಡೆಯಲು ಅನುಕೂಲವಾಗಲಿದೆ.

ಕಾರ್ಡ್ ವಿತರಕರು ಹಾಗೂ ನೆಟ್‌ವರ್ಕ್‌ಗಳೊಟ್ಟಿಗೆ ಒ‍ಪ್ಪಂದ ಮಾಡಿಕೊಳ್ಳಬಾರದು‌ ಎಂದು ಸೂಚಿಸಿದೆ. ಈಗಾಗಲೇ, ಕ್ರೆಡಿಟ್‌ ಕಾರ್ಡ್‌ ಹೊಂದಿದವರು ನವೀಕರಣದ ವೇಲೆ ನೆಟ್‌ವರ್ಕ್‌ ಅನ್ನು ಬದಲಾಯಿಸಲು ಅವಕಾಶ ಕಲ್ಪಿಸಲಾಗಿದೆ.

ADVERTISEMENT

ಪ್ರಸ್ತುತ ನೆಟ್‌ವರ್ಕ್‌ಗಳು ಮತ್ತು ಕಾರ್ಡ್ ವಿತರಕರ ನಡುವೆ ಅಸ್ತಿತ್ವದಲ್ಲಿರುವ ವ್ಯವಸ್ಥೆಯು ಗ್ರಾಹಕರಿಗೆ ಆಯ್ಕೆಯ ಅವಕಾಶ ಕಲ್ಪಿಸುವುದಿಲ್ಲ. ಹಾಗಾಗಿ, ಈ ಮಾರ್ಗಸೂಚಿ ಪ್ರಕಟಿಸಲಾಗಿದೆ ಎಂದು ಆರ್‌ಬಿಐ ಸುತ್ತೋಲೆಯಲ್ಲಿ ತಿಳಿಸಿದೆ. 

ಆದರೆ, 10 ಲಕ್ಷಕ್ಕಿಂತಲೂ ಕಡಿಮೆ ಸಂಖ್ಯೆಯ ಕಾರ್ಡ್‌ಗಳನ್ನು ವಿತರಿಸಿರುವ ಸಂಸ್ಥೆಗಳಿಗೆ ಹೊಸ ಮಾರ್ಗಸೂಚಿ ಅನ್ವಯವಾಗುವುದಿಲ್ಲ. ಸುತ್ತೋಲೆ ಪ್ರಕಟವಾದ ದಿನದಿಂದ ಆರು ತಿಂಗಳವರೆಗೆ ಈ ನಿಯಮಗಳು ಜಾರಿಯಲ್ಲಿ ಇರುತ್ತವೆ ಎಂದು ತಿಳಿಸಿದೆ. 

ಏನಿದು ಕಾರ್ಡ್‌ ನೆಟ್‌ವರ್ಕ್‌?:

ದೇಶದಲ್ಲಿ ಅಮೆರಿಕನ್‌ ಎಕ್ಸ್‌‍ಪ್ರೆಸ್‌ ಬ್ಯಾಂಕಿಂಗ್‌ ಕಾರ್ಪೊರೇಷನ್‌, ಡೈನರ್ಸ್‌ ಕ್ಲಬ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌, ಮಾಸ್ಟರ್‌ಕಾರ್ಡ್‌ ಏಷ್ಯಾ/ಫೆಸಿಪಿಕ್‌ ಲಿಮಿಟೆಡ್‌, ರಾಷ್ಟ್ರೀಯ ಪಾವತಿಗಳ ನಿಗಮದ (ಎನ್‌ಪಿಸಿಐ) ರುಪೇ ಹಾಗೂ ವೀಸಾ ವರ್ಲ್ಡ್‌ವೈಡ್‌ ಕಂಪನಿಯನ್ನು ಕಾರ್ಡ್‌ ನೆಟ್‌ವರ್ಕ್‌ಗಳೆಂದು ಆರ್‌ಬಿಐ ಅಧಿಕೃತಗೊಳಿಸಿದೆ. ರುಪೇ ದೇಶೀಯ ಕಾರ್ಡ್‌ ನೆಟ್‌ವರ್ಕ್‌ ಆಗಿದೆ. 

ದೇಶದಲ್ಲಿ 2023ರ ಡಿಸೆಂಬರ್‌ವರೆಗೆ 9.79 ಕೋಟಿ ಕ್ರೆಡಿಟ್‌ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದು ಆರ್‌ಬಿಐ ಅಂಕಿಅಂಶಗಳು ತಿಳಿಸಿವೆ.

ಈ ಪೈಕಿ ಶೇ 70ರಷ್ಟು ಕಾರ್ಡ್‌ಗಳನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌, ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌ ಹಾಗೂ ಎಕ್ಸಿಸ್‌ ಬ್ಯಾಂಕ್‌ ವಿತರಿಸಿವೆ.‌ ಸುಮಾರು 2 ಕೋಟಿ ಕಾರ್ಡ್‌ ವಿತರಿಸಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ ಮುಂಚೂಣಿಯಲ್ಲಿದೆ. ಎಸ್‌ಬಿಐ 1.84 ಕೋಟಿ ಕಾರ್ಡ್‌ಗಳನ್ನು ವಿತರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.