ADVERTISEMENT

ಇಂದು ರಿಸರ್ವ್‌ ಬ್ಯಾಂಕ್‌ ನಿರ್ದೇಶಕ ಮಂಡಳಿ ಸಭೆ

ಪಿಟಿಐ
Published 18 ನವೆಂಬರ್ 2018, 20:05 IST
Last Updated 18 ನವೆಂಬರ್ 2018, 20:05 IST
ಆರ್‌ಬಿಐ ಲೋಗೊ
ಆರ್‌ಬಿಐ ಲೋಗೊ   

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ಕೇಂದ್ರ ಸರ್ಕಾರದ ಮಧ್ಯೆ ನಡೆಯುತ್ತಿರುವ ಸಂಘರ್ಷವು ಸೋಮವಾರ ನಡೆಯಲಿ
ರುವ ಆರ್‌ಬಿಐ ನಿರ್ದೇಶಕ ಮಂಡಳಿ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿದೆ.

ಆರ್‌ಬಿಐನ ಮೀಸಲು ನಿಧಿ ಬಳಕೆ, ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಸಾಲ ನೀಡಿಕೆ ಸೇರಿದಂತೆ ಹಲವಾರು ವಿವಾದಾತ್ಮಕ ಸಂಗತಿಗಳ ಬಗ್ಗೆ ಮಂಡಳಿಯು ಚರ್ಚಿಸಲಿದೆ. ಹಣಕಾಸು ಸಚಿವಾಲಯದಿಂದ ನಾಮ ನಿರ್ದೇಶನಗೊಂಡವರು ಮತ್ತು ಕೆಲ ಸ್ವತಂತ್ರ ನಿರ್ದೇಶಕರು, ಗವರ್ನರ್‌ ಉರ್ಜಿತ್ ಪಟೇಲ್‌ ಮತ್ತು ನಾಲ್ವರು ಡೆಪ್ಯುಟಿ ಗವರ್ನರ್‌ ಅವರು ತಳೆದಿರುವ ನಿಲುವನ್ನು ಪ್ರಶ್ನಿಸುವ ಸಾಧ್ಯತೆ ಇದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿ ಸರಿಪಡಿಸುವ, ದೇಶಿ ಬ್ಯಾಂಕಿಂಗ್‌ ವ್ಯವಸ್ಥೆ ಸ್ವಚ್ಛಗೊಳಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಪಟೇಲ್‌ ಮತ್ತವರ ತಂಡ ಒಗ್ಗಟ್ಟು ಪ್ರದರ್ಶಿಸಲಿದೆ. ಕೆಲ ಸ್ವತಂತ್ರ ನಿರ್ದೇಶಕರೂ ಆರ್‌ಬಿಐನ ಬೆಂಬಲಕ್ಕೆ ನಿಲ್ಲಲಿದ್ದಾರೆ ಎನ್ನಲಾಗಿದೆ.

ADVERTISEMENT

ಪಟೇಲ್‌ರಿಂದ ನಿಲುವು ಸಮರ್ಥನೆ: ಕೇಂದ್ರದ ಜತೆ ಸಂಘರ್ಷಕ್ಕೆ ಇಳಿದಿರುವ ಉರ್ಜಿತ್ ಪಟೇಲ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಕೆಲ ವಲಯಗಳಲ್ಲಿ ಬೇಡಿಕೆ ವ್ಯಕ್ತವಾಗುತ್ತಿದೆ. ಆದರೆ, ಪಟೇಲ್‌ ಅವರು ಇಂತಹ ಒತ್ತಡ ತಂತ್ರಗಳಿಗೆ ಮಣಿಯುವ ಸಾಧ್ಯತೆ ಇಲ್ಲ. ವಸೂಲಾಗದ ಸಾಲ (ಎನ್‌ಪಿಎ) ಮತ್ತು ‘ಎಂಎಸ್‌ಎಂಇ’ ಸಾಲ ಕುರಿತು ಆರ್‌ಬಿಐ ತಳೆದಿರುವ ಕಠಿಣ ನಿಲುವನ್ನು ಬಲವಾಗಿ ಸಮರ್ಥಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿರ್ದೇಶಕ ಮಂಡಳಿಯ 18 ಸದಸ್ಯರಿಗೆ ಈಗಾಗಲೇ ವಿತರಿಸಿರುವ ಸಭೆಯ ಕಾರ್ಯಸೂಚಿ ಅನ್ವಯ ವಿಷಯಗಳು ಚರ್ಚೆಗೆ ಬರಲಿವೆ. ಅಧ್ಯಕ್ಷರ ಅನುಮತಿ ಮೇರೆಗೆ ಕಾರ್ಯಸೂಚಿಯಲ್ಲಿ ಇಲ್ಲದ ವಿಷಯಗಳನ್ನೂ ಸಭೆಯಲ್ಲಿ ಚರ್ಚಿಸಬಹುದಾಗಿದೆ.

ಕೆಲ ಬ್ಯಾಂಕ್‌ಗಳಿಗೆ ವಿಧಿಸಲಾಗಿರುವ ಕಠಿಣ ಸ್ವರೂಪದ ನಿರ್ಬಂಧಿತ ಕ್ರಮಗಳನ್ನು (ಪಿಸಿಎ) ಸಡಿಲಗೊಳಿಸುವ ಮತ್ತು ‘ಎಂಎಸ್‌ಎಂಇ’ ವಲಯಗಳಿಗೆ ಸುಲಭವಾಗಿ ಸಾಲ ವಿತರಿಸುವುದಕ್ಕೆ ಸರ್ಕಾರ ಮತ್ತು ಆರ್‌ಬಿಐ ಪರಸ್ಪರ ಒಪ್ಪಿತ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.

ಸಿಐಸಿ ನಿರ್ದೇಶನ: ಉದ್ದೇಶಪೂರ್ವಕ ಸುಸ್ತಿದಾರರ ಹೆಸರು ಬಹಿರಂಗಪಡಿಸಬೇಕು ಎಂದು ಕೇಂದ್ರ ಮಾಹಿತಿ ಆಯೋಗವು (ಸಿಐಸಿ), ಆರ್‌ಬಿಐ, ಪ್ರಧಾನಿ ಕಚೇರಿಗೆ (ಪಿಎಂಒ) ಮತ್ತೆ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.