ನವದೆಹಲಿ: ಡಿಜಿಟಲ್ ಪಾವತಿ ವ್ಯವಸ್ಥೆಗಳ ಮೂಲಕ ನಡೆಯುವ ವಂಚನೆಗಳನ್ನು ಮಟ್ಟ ಹಾಕುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಪ್ರಮುಖ ಬ್ಯಾಂಕ್‌ಗಳ ಜೊತೆಗೂಡಿ ಡಿಜಿಟಲ್ ಪಾವತಿ ಗುಪ್ತಚರ ವೇದಿಕೆ (ಡಿಪಿಐಪಿ) ಅಭಿವೃದ್ಧಿಪಡಿಸಲು ಮುಂದಾಗಿದೆ.
ಈ ವ್ಯವಸ್ಥೆಯನ್ನು ಆರ್‌ಬಿಐ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ (ಡಿಪಿಐ) ಮಾದರಿಯಲ್ಲಿ ಅಭಿವೃದ್ಧಿಪಡಿಸಲಿದೆ. ಇಡೀ ವ್ಯವಸ್ಥೆಯ ಮೇಲೆ ಆರ್‌ಬಿಐ ಮೇಲ್ವಿಚಾರಣೆ ಇರಲಿದೆ.
ಡಿಜಿಟಲ್ ಪಾವತಿ ವ್ಯವಸ್ಥೆಗಳ ಮೂಲಕ ವಂಚನೆಗಳು ನಡೆದಲ್ಲಿ, ಅದರ ಮಾಹಿತಿಯನ್ನು ತಕ್ಷಣವೇ ಹಂಚಿಕೊಳ್ಳುವ ಸೌಲಭ್ಯ ಇರಲಿದೆ. ಆ ಮೂಲಕ, ವಂಚನೆಯ ಉದ್ದೇಶದ ಡಿಜಿಟಲ್ ವಹಿವಾಟುಗಳನ್ನು ತಡೆಯುವ ಉದ್ದೇಶ ಆರ್‌ಬಿಐಗೆ ಇದೆ ಎಂದು ಮೂಲಗಳು ಹೇಳಿವೆ.
ವಂಚನೆ ಪ್ರಕರಣಗಳು ಖಾಸಗಿ ವಲಯದ ಬ್ಯಾಂಕ್‌ಗಳಿಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೂ ತಲೆನೋವಾಗಿ ಪರಿಣಮಿಸಿವೆ. ಹೀಗಾಗಿ ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ವ್ಯವಸ್ಥೆಯ ಸಾಂಸ್ಥಿಕ ರೂಪವನ್ನು ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ನೆರವು ಪಡೆದು ನಿರ್ಣಯಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಹೊಸ ವ್ಯವಸ್ಥೆಯ ರೂಪುರೇಷೆಗಳನ್ನು ಅಂತಿಮಗೊಳಿಸಲು ಆರ್‌ಬಿಐ ಈ ತಿಂಗಳ ಆರಂಭದಲ್ಲಿ ಉನ್ನತ ಮಟ್ಟದ ಸಭೆಯೊಂದನ್ನು ನಡೆಸಿದೆ. ವಿವಿಧ ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳು, ಆರ್‌ಬಿಐ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು.
ಡಿಜಿಟಲ್ ಪಾವತಿ ವ್ಯವಸ್ಥೆಗಳ ಮೂಲಕ ಆಗುವ ವಂಚನೆಗಳನ್ನು ತಡೆಯುವುದು ಕೇಂದ್ರ ಸರ್ಕಾರದ ಹಾಗೂ ಆರ್‌ಬಿಐನ ಆದ್ಯತೆಗಳಲ್ಲಿ ಒಂದು. ಹೀಗಾಗಿ, ಮುಂದಿನ ಕೆಲವು ತಿಂಗಳುಗಳಲ್ಲಿ ಈ ವ್ಯವಸ್ಥೆಯು ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.
ಈ ವ್ಯವಸ್ಥೆಯು ಕಾರ್ಯಾಚರಣೆ ಆರಂಭಿಸಿದ ನಂತರದಲ್ಲಿ ವಿವಿಧ ಮೂಲಗಳಿಂದ ಲಭ್ಯವಾಗುವ ದತ್ತಾಂಶ ವಿಶ್ಲೇಷಿಸಲಿದೆ. ವಂಚನೆಯ ಉದ್ದೇಶದ ವಹಿವಾಟುಗಳನ್ನು ಅದು ತಡೆಯಲಿದೆ. ಮಾಹಿತಿಯನ್ನು ತಕ್ಷಣಕ್ಕೆ ಹಂಚಿಕೊಳ್ಳುವ ಮೂಲಕ ವಹಿವಾಟುಗಳು ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳಲಿದೆ ಎಂದು ಮೂಲಗಳು ವಿವರಿಸಿವೆ.
* ಗರಿಷ್ಠ 10 ಬ್ಯಾಂಕ್‌ಗಳ ಜೊತೆ ಸಮಾಲೋಚನೆ ನಡೆಸಿ, ರಿಸರ್ವ್ ಬ್ಯಾಂಕ್ ಇನ್ನೊವೇಷನ್ ಹಬ್, ಡಿಪಿಐಪಿ ಮಾದರಿಯನ್ನು ರೂಪಿಸಲಿದೆ.
* ಕಾರ್ಡ್ ಬಳಸಿ ಮಾಡುವ ಪಾವತಿಗಳಲ್ಲಿ, ಇಂಟರ್ನೆಟ್ ಮೂಲಕ ಮಾಡುವ ಪಾವತಿಗಳಲ್ಲಿ ಹೆಚ್ಚಿನ ವಂಚನೆ ಪ್ರಕರಣಗಳು ವರದಿಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.