ADVERTISEMENT

ಶೇ 1.5ರಷ್ಟು ರೆಪೊ ಕಡಿತ ನಿರೀಕ್ಷೆ: ಎಸ್‌ಬಿಐ ಸಂಶೋಧನಾ ವರದಿ

ಪಿಟಿಐ
Published 5 ಮೇ 2025, 15:38 IST
Last Updated 5 ಮೇ 2025, 15:38 IST
ಎಸ್‌ಬಿಐ
ಎಸ್‌ಬಿಐ   

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶೇ 1.5ರಷ್ಟು ರೆಪೊ ದರ ಕಡಿತಗೊಳಿಸುವ ನಿರೀಕ್ಷೆ ಇದೆ ಎಂದು ಎಸ್‌ಬಿಐ ಸಂಶೋಧನಾ ವರದಿ ಸೋಮವಾರ ತಿಳಿಸಿದೆ.

ಆಹಾರ ಪದಾರ್ಥಗಳ ಬೆಲೆ ಇಳಿಕೆಯಿಂದ ಮಾರ್ಚ್‌ ತಿಂಗಳಿನಲ್ಲಿ ದೇಶದ ಚಿಲ್ಲರೆ ಹಣದುಬ್ಬರವು 67 ತಿಂಗಳ ಕನಿಷ್ಠ ಮಟ್ಟವಾದ ಶೇ 3.34ರಷ್ಟು ದಾಖಲಾಗಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸರಾಸರಿ ಹಣದುಬ್ಬರವು ಶೇ 4ಕ್ಕಿಂತ ಕಡಿಮೆ ದಾಖಲಾಗುವ ಅಂದಾಜಿದೆ. ಮೊದಲ ತ್ರೈಮಾಸಿಕದಲ್ಲಿ ಶೇ 3ಕ್ಕಿಂತ ಕಡಿಮೆ ಇರಲಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಅಂದಾಜಿಸಿದೆ.

ದೇಶದ ಸಾಂಕೇತಿಕ (ನಾಮಿನಲ್) ಜಿಡಿಪಿ ಬೆಳವಣಿಗೆ ಶೇ 9ರಿಂದ ಶೇ 9.5ರಷ್ಟು ಇರಬಹುದು. ಆರ್ಥಿಕ ವರ್ಷದ ಮೊದಲ ಭಾಗವಾದ ಜೂನ್‌ ಮತ್ತು ಆಗಸ್ಟ್‌ನಲ್ಲಿ ಶೇ 0.75ರಷ್ಟು ರೆಪೊ ಕಡಿತ ಮಾಡಬಹುದು. ದ್ವಿತೀಯಾರ್ಧದಲ್ಲಿ ಶೇ 0.50ರಷ್ಟು ಕಡಿಮೆ ಮಾಡಬಹುದು, ಒಟ್ಟು ಕಡಿತವು ಶೇ 1.25ರಷ್ಟಾಗಲಿದೆ. ಪ್ರಸಕ್ತ ಫೆಬ್ರುವರಿಯಲ್ಲಿ ಶೇ 0.25ರಷ್ಟು ಕಡಿತ ಮಾಡಿದೆ. 2026ರ ಮಾರ್ಚ್‌ ವೇಳೆಗೆ ರೆಪೊ ದರವು ಶೇ 5ರಿಂದ ಶೇ 5.25ರಷ್ಟು ಆಗಲಿದೆ ಎಂದು ಹೇಳಿದೆ. 

ADVERTISEMENT

ಜಂಬೋ ಮಾದರಿಯಲ್ಲಿ (ಶೇ 0.50 ಅಥವಾ ಅದಕ್ಕಿಂತ ಹೆಚ್ಚು ರೆಪೊ ದರ ಕಡಿತ) ರಿಸರ್ವ್‌ ಬ್ಯಾಂಕ್‌ ಕಡಿತ ಮಾಡಬೇಕಿದೆ. ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯು ಚಿಲ್ಲರೆ ಹಣದುಬ್ಬರದ ತಾಳಿಕೆ ಮಟ್ಟವನ್ನು ಶೇ 2ರಿಂದ ಶೇ 6ಕ್ಕೆ ನಿಗದಿಪಡಿಸಿದೆ. ಆದರೆ, ಸರಾಸರಿ ಹಣದುಬ್ಬರವು ಶೇಕಡಾ 4.7ರಷ್ಟಿದೆ.

ದೇಶದ ಹಣದುಬ್ಬರದ ಆಧಾರದ ಮೇಲೆ 2026ರ ಮಾರ್ಚ್‌ ವೇಳೆಗೆ ಒಟ್ಟು ಶೇ 1.5ರಷ್ಟು ಕಡಿತಗೊಳಿಸುವ ಸಾಧ್ಯತೆ ಇದೆ. ಫೆಬ್ರುವರಿಯಿಂದ ಇಲ್ಲಿಯವರೆಗೆ ಶೇ 0.50ರಷ್ಟು ರೆಪೊ ದರ ಕಡಿತಗೊಳಿಸಲಾಗಿದೆ. ಇದರಿಂದ ಬ್ಯಾಂಕ್‌ಗಳು ರೆಪೊ ಆಧಾರಿತ ಸಾಲದ ಮೇಲಿನ ಬಡ್ಡಿದರವನ್ನು ತಗ್ಗಿಸಿವೆ ಎಂದು ತಿಳಿಸಿದೆ. 

2025ರಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯವು ₹85ರಿಂದ ₹87ರ ನಡುವೆ ಇರುವ ಅಂದಾಜು ಇದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.