ADVERTISEMENT

ಆರ್‌ಬಿಐನಿಂದ ಶೇ 0.25ರಷ್ಟು ಬಡ್ಡಿದರ ಕಡಿತ: ತಜ್ಞರ ನಿರೀಕ್ಷೆ

ಪಿಟಿಐ
Published 26 ಜುಲೈ 2020, 14:03 IST
Last Updated 26 ಜುಲೈ 2020, 14:03 IST
ಆರ್‌ಬಿಐ
ಆರ್‌ಬಿಐ   

ಮುಂಬೈ: ಕೊರೊನಾ ವೈರಾಣುವಿನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಆರ್ಥಿಕತೆಗೆ ಚೇತರಿಕೆ ನೀಡಲು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಬಡ್ಡಿದರದಲ್ಲಿ‌ ಶೇಕಡ 0.25ರಷ್ಟು ಕಡಿತ ಮಾಡುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಗವರ್ನರ್‌ ಶಕ್ತಿಕಾಂತ್‌ ದಾಸ್‌ ನೇತೃತ್ವದ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಆಗಸ್ಟ್‌ 4ರಿಂದ 6ರವರೆಗೆ ಸಭೆ ಸೇರಲಿದ್ದು, ಬಡ್ಡಿದರ ಪರಾಮರ್ಶೆ ನಡೆಸಲಿದೆ. ಹಣದುಬ್ಬರವು ಆರ್‌ಬಿಐ ನಿರೀಕ್ಷೆಗಿಂತಲೂ ತುಸು ಹೆಚ್ಚಿಗೆ ಇದೆ. ಹೀಗಿದ್ದರೂ, ಸಾಲದ ಮೇಲಿನ ಬಡ್ಡಿದರ ಕಡಿಮೆ ಆಗುವಂತೆ ಆರ್‌ಬಿಐ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರ ಜೂನ್‌ನಲ್ಲಿ ಶೇ 6.09ರಷ್ಟಾಗಿದೆ. ಆದರೆ, ಹಣದುಬ್ಬರವನ್ನು ಶೇ 4ಕ್ಕೆ (ಇದರಲ್ಲಿ ಶೇ 2ರಷ್ಟು ಹೆಚ್ಚು ಅಥವಾ ಕಡಿಮೆ ಆಗಬಹುದು) ಮಿತಿಗೊಳಿಸಬೇಕು ಎಂದು ಸರ್ಕಾರವು ಆರ್‌ಬಿಐಗೆ ಸೂಚನೆ ನೀಡಿದೆ.

ADVERTISEMENT

‘ರೆಪೊ ದರದಲ್ಲಿ ಶೇ 0.25ರಷ್ಟು ಮತ್ತು ರಿವರ್ಸ್‌ ರೆಪೊ ದರದಲ್ಲಿ ಶೇ 0.35ರಷ್ಟು ಇಳಿಕೆಯಾಗುತ್ತದೆ ಎಂಬ ನಿರೀಕ್ಷೆ ಹೊಂದಿದ್ದೇವೆ’ ಎಂದು ಐಸಿಆರ್‌ಎನ ಮುಖ್ಯ ಆರ್ಥಿಕ ತಜ್ಞೆ ಅದಿತಿ ನಾಯರ್‌ ಹೇಳಿದ್ದಾರೆ.

ರೆಪೊ, ರಿವರ್ಸ್‌ ರೆಪೊ: ಬ್ಯಾಂಕ್‌ಗಳು ಆರ್‌ಬಿಐನಿಂದ ಪ‍ಡೆಯುವ ಸಾಲಕ್ಕೆ ವಿಧಿಸುವ ಬಡ್ಡಿದರಕ್ಕೆ ರೆಪೊ ದರ ಎಂದು ಕರೆಯಲಾಗುತ್ತದೆ. ಬ್ಯಾಂಕ್‌ಗಳು ಆರ್‌ಬಿಐನಲ್ಲಿ ಇರಿಸುವ ಹಣಕ್ಕೆ ಪಡೆಯುವ ಬಡ್ಡಿದರಕ್ಕೆ ರಿವರ್ಸ್‌ ರೆಪೊ ಎಂದು ಕರೆಯಲಾಗುತ್ತದೆ.

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಜ್‌ಕಿರಣ್‌ ರಾಯ್ ಅವರೂ ಬಡ್ಡಿದರ ಶೇ 0.25ರಷ್ಟು ಕಡಿತವಾಗಲಿದೆ ಎಂದು ಹೇಳಿದ್ದಾರೆ.

ಆರ್ಥಿಕತೆಯ ಮೇಲೆ ಕೋವಿಡ್‌–19 ಉಂಟುಮಾಡಬಹುದಾದ ದುಷ್ಪರಿಣಾಮ ತಡೆಯಲು ಆರ್‌ಬಿಐ ತನ್ನ ಪೂರ್ವ ನಿಯೋಜಿತ ಸಭೆಗೂ ಮೊದಲೇ ಮಾರ್ಚ್‌ನಲ್ಲಿ ಮತ್ತು ಮೇನಲ್ಲಿ ತುರ್ತು ಸಭೆ ನಡೆಸಿತು. ಆ ವೇಳೆ, ಬಡ್ಡಿದರದಲ್ಲಿ ಒಟ್ಟು ಶೇ 1.15ರಷ್ಟು ಇಳಿಕೆ ಮಾಡಿತ್ತು.

ಉದ್ಯಮ ವಲಯಕ್ಕೆ ತುರ್ತಾಗಿ ಸಾಲ ಮರುಹೊಂದಾಣಿಕೆ ಮಾಡುವ ಅಗತ್ಯವಿದೆ. ಆರ್‌ಬಿಐ ಈ ಬಗ್ಗೆ ಗಮನಹರಿಸಲಿ ಎಂದು ಅಸೋಚಾಂ ಪ್ರಧಾನ ಕಾರ್ಯದರ್ಶಿ ದೀಪಕ್ ಸೂದ್‌ ಸಲಹೆ ನೀಡಿದ್ದಾರೆ.

‘ಕೇಂದ್ರೀಯ ಬ್ಯಾಂಕ್‌ ಈ ಬಾರಿ ಬಡ್ಡಿದರದಲ್ಲಿ ಕಡಿತ ಮಾಡದೇ ಇರಬಹುದು. ಏಕೆಂದರೆ ಸದ್ಯಕ್ಕೆ ವ್ಯವಸ್ಥೆಯಲ್ಲಿ ಸಾಕಷ್ಟು ನಗದು ಲಭ್ಯವಿದ್ದು, ಬ್ಯಾಂಕ್‌ಗಳು ರೆಪೊ ದರ ಕಡಿತದ ಪ್ರಯೋಜವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿವೆ. ಹೀಗಾಗಿ ಬಡ್ಡಿದರ ಕಡಿಮೆ ಮಾಡುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ’ ಎಂದು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ನ ಖಜಾಂಚಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.