ADVERTISEMENT

ಹಣದುಬ್ಬರ ಏರಿಕೆ: ಬಡ್ಡಿದರ ಯಥಾಸ್ಥಿತಿ

ಎಂಎಸ್‌ಎಂಇ, ವಾಹನ ಮತ್ತು ರಿಯಲ್‌ ಎಸ್ಟೇಟ್‌ ವಲಯಕ್ಕೆ ಆರ್‌ಬಿಐ ಉತ್ತೇಜನ

ಪಿಟಿಐ
Published 6 ಫೆಬ್ರುವರಿ 2020, 19:45 IST
Last Updated 6 ಫೆಬ್ರುವರಿ 2020, 19:45 IST
ಶಕ್ತಿಕಾಂತ್‌
ಶಕ್ತಿಕಾಂತ್‌   

ನವದೆಹಲಿ: ಹಣದುಬ್ಬರದಲ್ಲಿ ದಿಢೀರ್‌ ಏರಿಕೆ ಮತ್ತು ಮಂದಗತಿಯ ಆರ್ಥಿಕ ಬೆಳವಣಿಗೆಯಿಂದಾಗಿ ಬಡ್ಡಿದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ) ಕೈಗೊಂಡಿದೆ.

ರೆಪೊದರ (ಶೇ 5.15) ಯಥಾಸ್ಥಿತಿಕಾಯ್ದುಕೊಂಡಿದ್ದರೂ, ಗೃಹ, ವಾಹನ ಮತ್ತು ಎಂಎಸ್‌ಎಂಇ ವಲಯಗಳಿಗೆ ಸುಲಭವಾಗಿ ಸಾಲ ಸಿಗುವಂತೆ ಆರ್‌ಬಿಐ ಮಾಡಿದೆ.ರಿಟೇಲ್‌ ಸಾಲವು ಕಡಿಮೆ ಬಡ್ಡಿ ದರಕ್ಕೆ ಸಿಗುವಂತೆ ಮಾಡಲು ಬ್ಯಾಂಕ್‌ಗಳಿಗೆ ವಿಧಿಸಿರುವ ನಿಯಮಗಳನ್ನು ಸಡಿಲಿಸಿದೆ. ಜತೆಗೆ ದೀರ್ಘಾವಧಿಗೆ (1 ರಿಂದ 3 ವರ್ಷ) ಶೇ 5.15ರ ಬಡ್ಡಿದರದಲ್ಲಿ ₹ 1 ಲಕ್ಷ ಕೋಟಿಯವರೆಗೆ ನೆರವು ನೀಡುವುದಾಗಿ ಭರವಸೆ ನೀಡಿದೆ.

ಇದರಿಂದಾಗಿ ಹಣಕಾಸು ಸಂಸ್ಥೆಗಳಿಗೆ ಸಾಲದ ಬಡ್ಡಿದರಗಳಲ್ಲಿ ಇಳಿಕೆ ಮಾಡಲು ಅನುಕೂಲ ಆಗಲಿದ್ದು, ಗ್ರಾಹಕರಿಗೂ ‘ಇಎಂಐ’ ಹೊರೆ ಕಡಿಮೆಯಾಗಲಿದೆ.

ADVERTISEMENT

ನಗದು ಮೀಸಲು ಅನುಪಾತದ (ಸಿಆರ್‌ಆರ್‌) ಅನ್ವಯ, ಠೇವಣಿ ₹ 100ರಂತೆ ಹೆಚ್ಚಾದಾಗ ಬ್ಯಾಂಕ್‌ಗಳು ₹ 4 ಅನ್ನು ಆರ್‌ಬಿಐನಲ್ಲಿ ಇಡಬೇಕು. ಇದೀಗ ಆರ್‌ಬಿಐ ಈ ನಿಯಮವನ್ನು ಸಡಿಲಿಸಿದ್ದು, ಗೃಹ ಮತ್ತು ಸಣ್ಣ ಉದ್ದಿಮೆಗಳಿಗೆ ನೀಡುವ ಸಾಲಕ್ಕೆ ಸಿಆರ್‌ಆರ್‌ ತೆಗೆದಿಡುವ ಅಗತ್ಯ ಇಲ್ಲ ಎಂದು ತಿಳಿಸಿದೆ. ಈ ವರ್ಷದ ಜುಲೈ ವರೆಗೆ ವಿನಾಯಿತಿ ಸಿಗಲಿದೆ.

ಸಾಲ ಪುನರ್‌ ಹೊಂದಾಣಿಕೆ: ಎಂಎಸ್‌ಎಂಇ ವಲಯಕ್ಕೆ ಸಾಲ ಪುನರ್‌ ಹೊಂದಾಣಿಕೆ ಅವಕಾಶವನ್ನು ಒಂದು ವರ್ಷದವರೆಗೆ ವಿಸ್ತರಿಸುವಂತೆ ಆರ್‌ಬಿಐಗೆ ಸೂಚನೆ ನೀಡುವುದಾಗಿ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದರು. ಅದರಂತೆ, 2021ರ ಮಾರ್ಚ್‌ 31ರವರೆಗೆ ವಿಸ್ತರಿಸಲಾಗಿದೆ.

ರಿಯಲ್‌ ಎಸ್ಟೇಟ್‌ ವಲಯಕ್ಕೆ ಉತ್ತೇಜನ ನೀಡಲು ವಾಣಿಜ್ಯ ಉದ್ದೇಶದ ಸಾಲದ ಬಳಕೆಗೆ ಸಂಬಂಧಿಸಿದಂತೆ ನಿಯಮ ಸಡಿಲಿಸಿದೆ. ನಿರ್ಮಾಣಗಾರರ ನಿಯಂತ್ರಣದಲ್ಲಿ ಇಲ್ಲದ ಕಾರಣಗಳಿಂದ ನಿರ್ಮಾಣ ಕಾಮಗಾರಿ ಕೈಗೊಳ್ಳುವುದು ವಿಳಂಬವಾದ ಸಂದರ್ಭದಲ್ಲಿ ನಿರ್ಮಾಣ ಕಾಮಗಾರಿ ಆರಂಭಿಸಲು ಒಂದು ವರ್ಷದವರೆಗೆ ಕಾಲಾವಧಿ ವಿಸ್ತರಿಸಲಾಗಿದೆ. ಈ ಉದ್ದೇಶಕ್ಕೆ ಪಡೆದಿರುವ ಸಾಲವು ವಸೂಲಾಗದ ಸಾಲವಾಗಿ (ಎನ್‌ಪಿಎ) ಪರಿವರ್ತನೆ ಆಗುವುದಿಲ್ಲ.

ಶೇ 6.5ಕ್ಕೆ ಏರಿಕೆ

ಕಚ್ಚಾ ತೈಲ ದರದಲ್ಲಿನ ಏರಿಳಿತ ಹಾಗೂ ಹಾಲು ಮತ್ತು ಬೇಳೆಕಾಳುಗಳ ಬೆಲೆ ಏರಿಕೆಯಿಂದಾಗಿ ಜನವರಿ–ಮಾರ್ಚ್‌ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರ ಶೇ 6.5ರಷ್ಟಕ್ಕೆ ಏರಿಕೆಯಾಗಲಿದೆ ಎಂದು ಆರ್‌ಬಿಐ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.