ADVERTISEMENT

ಹೂಡಿಕೆದಾರರ ವಿಶ್ವಾಸ ಹೆಚ್ಚಿಸಿದ ಕ್ರಮ: ಮಾರುಕಟ್ಟೆ ಪರಿಣತರ ವಿಶ್ಲೇಷಣೆ

ಪಿಟಿಐ
Published 27 ಏಪ್ರಿಲ್ 2020, 19:45 IST
Last Updated 27 ಏಪ್ರಿಲ್ 2020, 19:45 IST
   

ನವದೆಹಲಿ: ಮ್ಯೂಚುವಲ್ ಫಂಡ್‌ ಉದ್ದಿಮೆಗೆ ₹ 50 ಸಾವಿರ ಕೋಟಿ ವಿಶೇಷ ನೆರವು ನೀಡಲು ಮುಂದಾದ ಆರ್‌ಬಿಐ ನಿರ್ಧಾರವು ಹೂಡಿಕೆದಾರರ ವಿಶ್ವಾಸ ವೃದ್ಧಿಸಲಿದ್ದು, ಕಾರ್ಪೊರೇಟ್‌ ಸಾಲ ಮಾರುಕಟ್ಟೆಯಲ್ಲಿನ ಒತ್ತಡ ತಗ್ಗಿಸಲಿದೆ ಎಂದು ಪರಿಣತರು ವಿಶ್ಲೇಷಿಸಿದ್ದಾರೆ.

‘ಮಾರುಕಟ್ಟೆಯು ಸಹಜವಾಗಿ ಕಾರ್ಯನಿರ್ವಹಿಸಲು ಮತ್ತು ಹೂಡಿಕೆದಾರರಲ್ಲಿ ಆತ್ಮವಿಶ್ವಾಸ ಮೂಡಿಸುವ ಉತ್ತಮ ನಡೆ ಇದಾಗಿದೆ’ ಎಂದು ಭಾರತದ ಮ್ಯೂಚುವಲ್‌ ಫಂಡ್‌ ಸಂಘಗಳ (ಎಎಂಎಫ್‌ಐ) ಅಧ್ಯಕ್ಷ ನಿಲೇಶ್ ಶಾ ಪ್ರತಿಕ್ರಿಯಿಸಿದ್ದಾರೆ.

‘ಮ್ಯೂಚುವಲ್‌ ಫಂಡ್‌ ಹೂಡಿಕೆದಾರರಿಗೆ ಹಿತಾನುಭವ ನೀಡಲಿದ್ದು, ಹಣಕಾಸು ಸ್ಥಿರತೆ ಕಾಯ್ದುಕೊಳ್ಳಲು ನೆರವಾಗಲಿದೆ’ ಎಂದು ಈಕ್ವಿರಸ್‌ ವೆಲ್ತ್‌ನ ಸಿಇಒ ಅಂಕುರ್‌ ಮಹೇಶ್ವರಿ ಹೇಳಿದ್ದಾರೆ.

ADVERTISEMENT

ಆಡಳಿತ ಮಂಡಳಿ ವಶಕ್ಕೆ ಒತ್ತಾಯ: ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಆಡಳಿತ ಮಂಡಳಿ ವಶಕ್ಕೆ ತೆಗೆದುಕೊಂಡು ಅದರ ಹೂಡಿಕೆ ನಿರ್ಧಾರಗಳನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿ ರಚಿಸಲು ರಾಷ್ಟ್ರೀಯ ಷೇರುಪೇಟೆ ಸದಸ್ಯರ ಸಂಘವು (ಎಎನ್‌ಎಂಐ) ಸರ್ಕಾರವನ್ನು ಒತ್ತಾಯಿಸಿದೆ.

ಹೂಡಿಕೆದಾರರ ಸಂಪತ್ತು ಕರಗದಂತೆ ಕ್ರಮ ಕೈಗೊಂಡು ಅವರ ಹಿತರಕ್ಷಣೆ ಮಾಡಬೇಕು, ಹೂಡಿಕೆದಾರರ ಹಣ ಮರಳಿಸಲು ಕಾಲಮಿತಿ ನಿಗದಿಪಡಿಸಬೇಕು ಎಂದು ಆಗ್ರಹಿಸಿದೆ. ಈ ಸಂಘವು 900 ಷೇರು ದಲ್ಲಾಳಿಗಳನ್ನು ಪ್ರತಿನಿಧಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.