ADVERTISEMENT

ಹಣದುಬ್ಬರ ನಿಯಂತ್ರಣಕ್ಕೆ ಅಂಟಿಕೊಂಡಿದ್ದರೆ ತೊಂದರೆಯಾಗುತ್ತಿತ್ತು: ಶಕ್ತಿಕಾಂತ

ಪಿಟಿಐ
Published 17 ಜೂನ್ 2022, 16:19 IST
Last Updated 17 ಜೂನ್ 2022, 16:19 IST
ಶಕ್ತಿಕಾಂತ ದಾಸ್
ಶಕ್ತಿಕಾಂತ ದಾಸ್   

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತನ್ನ ನೀತಿಗಳ ವಿಚಾರದಲ್ಲಿ ಹಿಂದುಳಿದಿಲ್ಲ ಎಂದು ಹೇಳಿರುವ ಗವರ್ನರ್ ಶಕ್ತಿಕಾಂತ ದಾಸ್, ಹಣದುಬ್ಬರ ದರವನ್ನು ಶೇಕಡ 4ಕ್ಕೆ ನಿಗದಿ ಮಾಡಬೇಕು ಎಂಬ ಗುರಿಗೇ ಅಂಟಿಕೊಳ್ಳುವುದು ‘ಸಾಂಕ್ರಾಮಿಕದಿಂದ ತತ್ತರಿಸಿದ್ದ ಅರ್ಥ ವ್ಯವಸ್ಥೆ ಪಾಲಿಗೆ ವಿನಾಶಕಾರಿ’ ಆಗುತ್ತಿತ್ತು ಎಂದು ಹೇಳಿದ್ದಾರೆ.

‘ಸಾಂಕ್ರಾಮಿಕದ ಸಂದರ್ಭದಲ್ಲಿ ಹೆಚ್ಚಿನ ಹಣದುಬ್ಬರವನ್ನು ಸಹಿಸಿಕೊಳ್ಳುವುದು ಅಗತ್ಯವಾಗಿತ್ತು. ಆ ತೀರ್ಮಾನಕ್ಕೆ ನಾವು ಈಗಲೂ ಬದ್ಧ’ ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಒಟ್ಟು ಆಂತರಿಕ ಉತ್ಪಾದನೆಯ ಮಟ್ಟವು ಕೋವಿಡ್‌ ಪೂರ್ವದ ಮಟ್ಟವನ್ನು ದಾಟಿದೆ ಎಂಬುದನ್ನು ಕಂಡುಕೊಂಡ ನಂತರವೇ ಆರ್‌ಬಿಐ ಹಣದುಬ್ಬರ ನಿಯಂತ್ರಣದ ಕಡೆ ಗಮನ ನೀಡಿತು ಎಂದು ಅವರು ಹೇಳಿದ್ದಾರೆ.

ADVERTISEMENT

‘ನಾವು ಸಮಯದ ಅಗತ್ಯ ಏನಿತ್ತೋ ಅದನ್ನು ಮಾಡಿದ್ದೇವೆ. ನಾವು ಹಿಂದೆ ಬಿದ್ದಿದ್ದೆವು ಎಂಬ ಮಾತನ್ನು ಒಪ್ಪುವುದಿಲ್ಲ’ ಎಂದು ದಾಸ್ ಪ್ರತಿಪಾದಿಸಿದ್ದಾರೆ. ‘ಸಾಂಕ್ರಾಮಿಕದ ಸಂದರ್ಭದಲ್ಲಿ ಹಣಕಾಸಿನ ನೀತಿಯನ್ನು ಬಿಗಿಯಾಗಿ ಇರಿಸಿದ್ದಿದ್ದರೆ, ದೇಶದ ಅರ್ಥ ವ್ಯವಸ್ಥೆ ಹಾಗೂ ಹಣಕಾಸು ಮಾರುಕಟ್ಟೆಗಳ ಮೇಲೆ ಆಗಬಹುದಾಗಿದ್ದ ಹಾನಿಯು ಭಾರಿ ಪ್ರಮಾಣದ್ದಾಗಿರುತ್ತಿತ್ತು. ಸುಧಾರಿಸಿಕೊಳ್ಳಲು ಭಾರತಕ್ಕೆ ವರ್ಷಗಳೇ ಬೇಕಾಗುತ್ತಿತ್ತು’ ಎಂದೂ ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.