ADVERTISEMENT

ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆ: ರೆಪೊ ದರ ಕಡಿತ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 18:32 IST
Last Updated 3 ಆಗಸ್ಟ್ 2025, 18:32 IST
ರೆಪೊ ದರ ಶೇ 0.25 ಏರಿಕೆ: ಆರ್‌ಬಿಐ
ರೆಪೊ ದರ ಶೇ 0.25 ಏರಿಕೆ: ಆರ್‌ಬಿಐ   

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯ ಸಭೆಯು ಸೋಮವಾರದಿಂದ ಶುರುವಾಗಲಿದ್ದು, ರೆಪೊ ದರವನ್ನು ತಗ್ಗಿಸುವ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಚಿಲ್ಲರೆ ಹಣದುಬ್ಬರ ಪ್ರಮಾಣವು ಆರ್‌ಬಿಐ ಮಿತಿಯಲ್ಲಿ ಇದೆ. ಆದರೆ ಅಮೆರಿಕವು ಹೇರಿರುವ ಸುಂಕವು ದೇಶದ ಆರ್ಥಿಕ ಬೆಳವಣಿಗೆ ಪ್ರಮಾಣವನ್ನು ತಗ್ಗಿಸುವ ಸಾಧ್ಯತೆ ಇದೆ. ಹೀಗಾಗಿ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದ ರೆಪೊ ದರವನ್ನು ತಗ್ಗಿಸಬಹುದು ಎಂದು ತಜ್ಞರು ಅಂದಾಜು ಮಾಡಿದ್ದಾರೆ.

ಎಸ್‌ಬಿಐ ರಿಸರ್ಚ್‌ ತನ್ನ ವರದಿಯೊಂದರಲ್ಲಿ ‘ಆರ್‌ಬಿಐ ರೆಪೊ ದರವನ್ನು ಆಗಸ್ಟ್‌ನಲ್ಲಿ ಶೇ 0.25ರಷ್ಟು ಕಡಿತ ಮಾಡಬಹುದು ಎಂಬುದು ನಮ್ಮ ನಿರೀಕ್ಷೆ’ ಎಂದು ಹೇಳಿದೆ. ರೆಪೊ ದರ ಕುರಿತ ನಿರ್ಧಾರವನ್ನು ಆರ್‌ಬಿಐ ಬುಧವಾರ ಪ್ರಕಟಿಸಲಿದೆ.

ADVERTISEMENT

ಜಿಡಿಪಿ ಹಾಗೂ ಹಣದುಬ್ಬರಕ್ಕೆ ಸಂಬಂಧಿಸಿದ ಅಂಕಿ–ಅಂಶಗಳು ರೆಪೊ ದರ ಇಳಿಕೆಗೆ ಪೂರಕವಾಗಿ ಒದಗಿಬಂದಿವೆ ಎಂದು ಎಸ್‌ಬಿಎಂ ಬ್ಯಾಂಕ್‌ ಇಂಡಿಯಾದ ಹಣಕಾಸು ಮಾರುಕಟ್ಟೆಗಳ ಮುಖ್ಯಸ್ಥ ಮಂದಾರ್ ಪಿತಾಲೆ ಹೇಳಿದ್ದಾರೆ.

‘ಹಣದುಬ್ಬರವು ಕಡಿಮೆ ಇದೆ. ಜಿಡಿಪಿ ಬೆಳವಣಿಗೆ ಕುಗ್ಗಬಹುದು ಎಂಬ ಅಂದಾಜು ಇದೆ. ಹೀಗಾಗಿ ರೆಪೊ ದರವನ್ನು ಶೇ 0.25ರಷ್ಟು ಇಳಿಕೆ ಮಾಡಲು ಇದು ಸೂಕ್ತ ಸಮಯ’ ಎಂದು ಅವರು ಹೇಳಿದ್ದಾರೆ.

ಅಮೆರಿಕವು ಭಾರತದ ಸರಕುಗಳ ಮೇಲೆ ಶೇ 25ರಷ್ಟು ಸುಂಕ ಹೇರಿರುವುದರ ಪರಿಣಾಮವಾಗಿ ಜಿಡಿಪಿ ಬೆಳವಣಿಗೆ ದರವು ಶೇ 0.30ವರೆಗೆ ಇಳಿಕೆ ಆಗಬಹುದು ಎಂಬ ಅಂದಾಜು ಇದೆ. ರೆಪೊ ದರ ಕುರಿತ ತೀರ್ಮಾನವು ಮುಂದಿನ ಕೆಲವು ದಿನಗಳವರೆಗೆ ಷೇರುಪೇಟೆಯ ವಹಿವಾಟಿನ ಮೇಲೆಯೂ ಪ್ರಭಾವ ಬೀರುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.