ADVERTISEMENT

ಕೋರಿಕೆ ಇಲ್ಲದೆ ಕ್ರೆಡಿಟ್ ಕಾರ್ಡ್‌ ವಿತರಣೆಗೆ ಆರ್‌ಬಿಐ ನಿರ್ಬಂಧ

ಹೊಸ ನಿರ್ದೇಶನ ಜುಲೈ 1ರಿಂದ ಜಾರಿಗೆ

ಪಿಟಿಐ
Published 21 ಏಪ್ರಿಲ್ 2022, 21:04 IST
Last Updated 21 ಏಪ್ರಿಲ್ 2022, 21:04 IST
ಕ್ರೆಡಿಟ್ ಕಾರ್ಡ್‌
ಕ್ರೆಡಿಟ್ ಕಾರ್ಡ್‌   

ಮುಂಬೈ: ಗ್ರಾಹಕರಿಂದ ಕೋರಿಕೆ ಇಲ್ಲದಿದ್ದರೆ ಕ್ರೆಡಿಟ್ ಕಾರ್ಡ್ ನೀಡಬಾರದು, ಗ್ರಾಹಕರಿಂದ ಒಪ್ಪಿಗೆ ಪಡೆಯದೆ ಹಾಲಿ ಇರುವ ಕ್ರೆಡಿಟ್ ಕಾರ್ಡ್‌ಗಳನ್ನು ಮೇಲ್ದರ್ಜೆಗೆ ಏರಿಸಬಾರದು ಎಂದು ಆರ್‌ಬಿಐ, ಕ್ರೆಡಿಟ್ ಕಾರ್ಡ್ ನೀಡುವ ಕಂಪನಿಗಳಿಗೆ ಸೂಚಿಸಿದೆ. ಈ ನಿಯಮ ಉಲ್ಲಂಘಿಸಿದರೆ ಕಂಪನಿಗಳು, ಕ್ರೆಡಿಟ್ ಕಾರ್ಡ್ ಬಿಲ್ ಮೊತ್ತದ ಎರಡರಷ್ಟನ್ನು ದಂಡದ ರೂಪದಲ್ಲಿ ಪಾವತಿಸಬೇಕು ಎಂದು ಹೇಳಿದೆ.

ಬಾಕಿ ಮೊತ್ತ ವಸೂಲು ಮಾಡುವ ಸಂದರ್ಭದಲ್ಲಿ ಗ್ರಾಹಕರಿಗೆ ಬೆದರಿಕೆ ಒಡ್ಡಬಾರದು, ಅವರಿಗೆ ಕಿರುಕುಳ ನೀಡಬಾರದು ಎಂದು ಕಾರ್ಡ್ ವಿತರಣಾ ಕಂಪನಿಗಳಿಗೆ ಹಾಗೂ ಮಧ್ಯವರ್ತಿಯಾಗಿ ಕೆಲಸ ಮಾಡುವ ಏಜೆಂಟ್‌ಗಳಿಗೆ ತಾಕೀತು ಮಾಡಿದೆ.

‘ಗ್ರಾಹಕರಿಂದ ಕೋರಿಕೆ ಇಲ್ಲದೆ ಕ್ರೆಡಿಟ್ ಕಾರ್ಡ್ ವಿತರಿಸುವುದು, ಮೇಲ್ದರ್ಜೆಗೆ ಏರಿಸುವುದನ್ನು ನಿರ್ಬಂಧಿಸಲಾಗಿದೆ’ ಎಂದು ಹೇಳಿದೆ. ಈ ನಿರ್ದೇಶನಗಳು ಜುಲೈ 1ರಿಂದ ಜಾರಿಗೆ ಬರಲಿವೆ.

ADVERTISEMENT

‘ಕೋರಿಕೆ ಸಲ್ಲಿಸದಿದ್ದರೂ ಕಾರ್ಡ್ ಪಡೆದಲ್ಲಿ ಅಂತಹ ವ್ಯಕ್ತಿಯು ಆರ್‌ಬಿಐ ಒಂಬುಡ್ಸ್‌ಮನ್‌ ಮೊರೆ ಹೋಗಬಹುದು. ಕ್ರೆಡಿಟ್ ಕಾರ್ಡ್ ನೀಡಿದ ಕಂಪನಿ ಗ್ರಾಹಕರಿಗೆ ಪಾವತಿಸಬೇಕಿರುವ ಪರಿಹಾರ ಮೊತ್ತವನ್ನು ಒಂಬುಡ್ಸ್‌ಮನ್ ತೀರ್ಮಾನಿಸುತ್ತಾರೆ’ ಎಂದು ಆರ್‌ಬಿಐ ಹೇಳಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳು ತನ್ನ ಅನುಮತಿ ಇಲ್ಲದೆ ಕ್ರೆಡಿಟ್ ಕಾರ್ಡ್ ವಹಿವಾಟು ಶುರುಮಾಡುವಂತೆ ಇಲ್ಲ ಎಂದು ಹೇಳಿದೆ.

‘ಕಾರ್ಡ್ ನೀಡುವ ಕಂಪನಿಗಳು, ಅವುಗಳು ನೇಮಕ ಮಾಡುವ ಏಜೆಂಟ್‌ಗಳು ಬಾಕಿ ಮೊತ್ತ ವಸೂಲು ಮಾಡಲು ಗ್ರಾಹಕರನ್ನು ಬೆದರಿಸುವ ಕೆಲಸಕ್ಕೆ ಇಳಿಯುವಂತಿಲ್ಲ.’ ಎಂದು ಕೂಡ ಆರ್‌ಬಿಐ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.