ADVERTISEMENT

ಭದ್ರತೆರಹಿತ ಸಾಲ: ₹2 ಲಕ್ಷಕ್ಕೆ ಏರಿಕೆ

ಪಿಟಿಐ
Published 14 ಡಿಸೆಂಬರ್ 2024, 16:02 IST
Last Updated 14 ಡಿಸೆಂಬರ್ 2024, 16:02 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಬ್ಯಾಂಕ್‌ಗಳಲ್ಲಿ ಕೃಷಿ ಹಾಗೂ ಅದಕ್ಕೆ ಸಂಬಂಧಿತ ಚಟುವಟಿಕೆಗಳಿಗೆ ಯಾವುದೇ ಭದ್ರತೆ ಇಲ್ಲದೆ (ಅಡಮಾನರಹಿತ) ರೈತರಿಗೆ ನೀಡುವ  ಸಾಲದ ಮಿತಿಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ₹2 ಲಕ್ಷಕ್ಕೆ ಹೆಚ್ಚಿಸಿದೆ. ಈ ಆದೇಶವು ಜನವರಿ 1ರಿಂದ ಜಾರಿಗೆ ಬರಲಿದೆ.

ಈ ಮೊದಲು ಅಡಮಾನರಹಿತ ಸಾಲದ ಮಿತಿಯು ₹1.60 ಲಕ್ಷ ಇತ್ತು. ಪ್ರಸ್ತುತ ಕೃಷಿ ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾಗಿದೆ. ಇದರಿಂದ ಅತಿಸಣ್ಣ ಮತ್ತು ಸಣ್ಣ ರೈತರಿಗೆ ಅನುಕೂಲ ಕಲ್ಪಿಸಲು ಸಾಲದ ಮಿತಿಯನ್ನು ಹೆಚ್ಚಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಿಗದಿಪಡಿಸಿರುವ ಈ ಸಾಲವನ್ನು ಯಾವುದೇ ಭದ್ರತೆ ಇಲ್ಲದೆ ನೀಡಬೇಕು ಎಂದು ಎಲ್ಲಾ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ.

ADVERTISEMENT

ಕೃಷಿ ವೆಚ್ಚದ ಹೆಚ್ಚಳದಿಂದ ಶೇ 86ರಷ್ಟು ಅತಿಸಣ್ಣ ಮತ್ತು ಸಣ್ಣ ರೈತರು ಸಕಾಲದಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಸಂಕಷ್ಟ ಅನುಭವಿಸುವಂತಾಗಿದೆ. ಹಾಗಾಗಿ, ಕೃಷಿ ಸಾಲ ನೀಡಿಕೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಆರ್‌ಬಿಐ ಕೈಗೊಂಡಿರುವ ಈ ಕ್ರಮವು ರೈತರಿಗೆ ವರದಾನವಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಹೇಳಿದೆ.

ಎಲ್ಲಾ ಬ್ಯಾಂಕ್‌ಗಳು ಆರ್‌ಬಿಐನ ಮಾರ್ಗಸೂಚಿ ಅನ್ವಯ ರೈತರಿಗೆ ಸಾಲ ಸೌಲಭ್ಯ ಕಲ್ಪಿಸಬೇಕು. ಈ ಬಗ್ಗೆ ವ್ಯಾ‍ಪಕವಾಗಿ ಜಾಗೃತಿ ಮೂಡಿಸಬೇಕು ಎಂದು ಹೇಳಿದೆ.

ಆರ್‌ಬಿಐನ ಈ ಕ್ರಮದಿಂದಾಗಿ ಕಿಸಾನ್‌ ಕ್ರೆಡಿಟ್‌ ಕಾರ್ಡ್ (ಕೆಸಿಸಿ) ಯೋಜನೆಯಡಿ ಸಾಲ ಪಡೆಯುವ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸದ್ಯ ಕೆಸಿಸಿ ಅಡಿ ಶೇ 4ರ ಬಡ್ಡಿದರದಲ್ಲಿ ₹3 ಲಕ್ಷದವರೆಗೆ ಸಾಲ ಸೌಲಭ್ಯ ಸಿಗುತ್ತಿದೆ. ಈ ಪೈಕಿ ₹2 ಲಕ್ಷದವರೆಗೆ ಅಡಮಾನರಹಿತ ಸಾಲ ದೊರೆಯಲಿದೆ.

ಕೆಸಿಸಿ ಅಡಿ ರೈತರಿಗೆ ಕ್ರೆಡಿಟ್‌ ಕಾರ್ಡ್ ನೀಡಲಾಗುತ್ತದೆ. ಈ ಕಾರ್ಡ್‌ ಬಳಸಿ ರೈತರು ಕೃಷಿ ಅಗತ್ಯತೆಗೆ ಅನುಗುಣವಾಗಿ ಸಾಲ ಪಡೆಯಬಹುದಾಗಿದೆ. ಬಿತ್ತನೆ, ಬೆಳೆ ಪೋಷಣೆ, ಫಸಲಿಗೆ ರಸಗೊಬ್ಬರ ಪೂರೈಕೆ ಸೇರಿ ಇತರೆ ಕೃಷಿ ಚಟುವಟಿಕೆಗಳಿಗೆ ಕಾರ್ಡ್‌ ಬಳಸಿ ಸಾಲ ಪಡೆಯಬಹುದಾಗಿದೆ.

ಆರ್‌ಬಿಐನ ಕ್ರಮದಿಂದ ಕೃಷಿ ವಲಯದಲ್ಲಿ ಆರ್ಥಿಕ ಸೇರ್ಪಡೆಗೆ ಉತ್ತೇಜನ ಸಿಗಲಿದೆ. ಕೃಷಿ ಚಟುವಟಿಕೆಗಳ ಕಾರ್ಯಾಚರಣೆಯಲ್ಲಿ ಹೂಡಿಕೆ ಮಾಡಲು ರೈತರಿಗೆ ಸಹಕಾರಿಯಾಗಲಿದ್ದು, ಅವರ ಜೀವನಮಟ್ಟವೂ ಸುಧಾರಣೆಯಾಗಲಿದೆ. ಇದು ಕೃಷಿ ಆರ್ಥಿಕತೆ ಬೆಳವಣಿಗೆಗೆ ನೆರವಾಗಲಿದೆ ಎಂದು ಕೃಷಿ ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.