ADVERTISEMENT

ಆರ್‌ಬಿಐ ಮೀಸಲು ಸದ್ಬಳಕೆಯಾಗಲಿ: ಅರವಿಂದ್‌ ಸುಬ್ರಮಣಿಯನ್‌

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 18:30 IST
Last Updated 13 ಡಿಸೆಂಬರ್ 2018, 18:30 IST
ಅರವಿಂದ ಸುಬ್ರಮಣಿಯನ್‌
ಅರವಿಂದ ಸುಬ್ರಮಣಿಯನ್‌   

ಬೆಂಗಳೂರು: ‘ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮೀಸಲು ನಿಧಿಯಲ್ಲಿ ಇರುವ ಹೆಚ್ಚುವರಿ ಹಣವನ್ನು ಸದುದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬೇಕು’ ಎಂದು ಕೇಂದ್ರ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್‌ ಸುಬ್ರಮಣಿಯನ್‌ ಅವರು ಬಲವಾಗಿ
ಪ್ರತಿಪಾದಿಸಿದ್ದಾರೆ.

ನಗರದಲ್ಲಿ ಗುರುವಾರ ಸಂಜೆ ನಡೆದ, ತಮ್ಮ ಹೊಸ ಪುಸ್ತಕ ’ಆಫ್ ಕೌನ್ಸೆಲ್‌; ದಿ ಚಾಲೆಂಜಿಸ್‌ ಆಫ್‌ ಮೋದಿ – ಜೇಟ್ಲಿ ಇಕಾನಮಿ’ ಬಿಡುಗಡೆ ಸಮಾರಂಭದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

‘ಆರ್‌ಬಿಐನ ಬಳಿ ಇರುವ ಹೆಚ್ಚುವರಿ ಹಣವನ್ನು ಹಣಕಾಸು ವ್ಯವಸ್ಥೆಯಲ್ಲಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮಾತ್ರ ಬಳಸಿಕೊಳ್ಳಬೇಕು. ಕೇಂದ್ರ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳು, ರೈತರ ಸಾಲ ಮನ್ನಾದಂತಹ ಅನುತ್ಪಾದಕ ಉದ್ದೇಶಗಳಿಗೆ ಬಳಕೆ ಮಾಡಬಾರದು. ಈ ವಿಷಯದಲ್ಲಿ ಸರ್ಕಾರ ಮತ್ತು ಆರ್‌ಬಿಐ ಮಧ್ಯೆ ಸಹಮತ ಇರಬೇಕು.

ADVERTISEMENT

‘ಕೇಂದ್ರೀಯ ಬ್ಯಾಂಕ್‌ನ ಸ್ವಾಯತ್ತತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಜತೆ ಉದ್ಭವಿಸಿರುವ ಸಂಘರ್ಷದಲ್ಲಿ ವ್ಯಕ್ತಿಗಳು ಮುಖ್ಯವಲ್ಲ. ಆರ್‌ಬಿಐನ ಘನತೆ ಕಾಪಾಡಿಕೊಳ್ಳುವುದು ಇಲ್ಲಿ ಮುಖ್ಯವಾಗಿದೆ. ಆರ್‌ಬಿಐನ ನಿರ್ದೇಶಕ ಮಂಡಳಿ ರಾಜಕೀಯಗೊಂಡಿದೆ. ಈ ಕಾರಣಕ್ಕಾಗಿಯೇ ಅದರ ಸ್ವಾಯತ್ತತೆ ರಕ್ಷಿಸಿಕೊಳ್ಳುವ ಪ್ರಶ್ನೆ ಉದ್ಭವಿಸಿದೆ. ದೇಶದ ಶ್ರೇಷ್ಠ ಸಂಸ್ಥೆಗಳಲ್ಲಿ ಒಂದಾಗಿರುವ ಆರ್‌ಬಿಐನ ಸ್ವಾಯತ್ತತೆಯನ್ನು ಕಾಯ್ದುಕೊಳ್ಳಲೇಬೇಕು. ನನ್ನ ಈ ‍ಪುಸ್ತಕತದಲ್ಲಿ ಆರ್‌ಬಿಐನ ಪಾತ್ರದ ಬಗ್ಗೆ ವಿಮರ್ಶಾತ್ಮಕವಾಗಿ ಬರೆದಿರುವೆ.

‘ರಾಜಕೀಯ ಉದ್ದೇಶ ಸಾಧನೆಗೆ ಆರ್‌ಬಿಐನ ಘನತೆಗೆ ಕುಂದು ತರುವ ಪ್ರಯತ್ನಗಳಿಗೆ ಗಟ್ಟಿಯಾಗಿ ಅಂಟಿಕೊಂಡರೆ ದೀರ್ಘಾವಧಿಯಲ್ಲಿ ನಾವು ಅದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದೂ ಎಚ್ಚರಿಸಿದರು.

‘ಆರ್‌ಬಿಐ ತನ್ನ ಸ್ವಾತಂತ್ರ್ಯ, ಸ್ವಾಯತ್ತತೆ ರಕ್ಷಿಸಿಕೊಳ್ಳಲು ಕಾಳಜಿ ತೋರುವುದರ ಜತೆಗೆ ಸಹಕಾರ, ಸಂಧಾನ ಮಾರ್ಗಗಳಿಗೂ ತೆರೆದುಕೊಂಡಿರಬೇಕು. ಹಣಕಾಸು ಸ್ಥಿರತೆ ಎನ್ನುವುದು ಬರೀ ಆರ್‌ಬಿಐಗೆ ಸಂಬಂಧಿಸಿದ ವಿಷಯವಲ್ಲ. ಅದೊಂದು ಕೇಂದ್ರ ಸರ್ಕಾರ ಮತ್ತು ಇಡೀ ದೇಶಕ್ಕೂ ಸಂಬಂಧಿಸಿದ ವಿಷಯವಾಗಿರುತ್ತದೆ. ಹೀಗಾಗಿ ಯಾರೊಬ್ಬರೂ ಜಿಗುಟು ಧೋರಣೆ ಅನುಸರಿಸಬಾರದು.

‘ನೋಟು ರದ್ದತಿಯು ದೇಶಿ ಆರ್ಥಿಕತೆಗೆ ಒಳಿತಿಗಿಂತ ಕೆಡುಕನ್ನೇ ಮಾಡುವುದು ಗೊತ್ತಿದ್ದರೂ, ಸರ್ಕಾರದ ಭಾಗವಾಗಿದ್ದ ನೀವು ಆ ಸಂದರ್ಭದಲ್ಲಿ ಪ್ರಶ್ನಿಸಲಿಲ್ಲ ಏಕೆ. ನಿರ್ಧಾರ ಪ್ರತಿಭಟಿಸಿ ಸರ್ಕಾರದಿಂದ ಹೊರಬರಲಿಲ್ಲ ಏಕೆ. ಎಲ್ಲವೂ ಮುಗಿದು ಹೋದ ನಂತರ ಈ ಬಗ್ಗೆ ಮಾತನಾಡುವಿರಲ್’ಲ ಎಂದು ಸಂವಾದ ನಡೆಸಿಕೊಟ್ಟ ಇನ್ಫೊಸಿಸ್‌ನ ಕಾರ್ಯನಿರ್ವಾಹಕಯೇತರ ಅಧ್ಯಕ್ಷ ನಂದನ್‌ ನಿಲೇಕಣಿ ಅವರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅರವಿಂದ್‌, ‘ನನ್ನ ಹೇಳಿಕೆಯನ್ನು ಈಗ ಬೇರೆ, ಬೇರೆ ನೆಲೆಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಆರ್ಥಿಕ ಸಮೀಕ್ಷೆಯಲ್ಲಿ ನಾನು ಈ ಬಗ್ಗೆ ನನ್ನ ನಿಲುವನ್ನು ಸ್ಪಷ್ಟಪಡಿಸಿದ್ದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.