ADVERTISEMENT

ಆರ್‌ಬಿಐ ಲಾಭಾಂಶದಿಂದ ಕೇಂದ್ರ ಸರ್ಕಾರಕ್ಕೆ ₹2.69 ಲಕ್ಷ ಕೋಟಿ: ಎಸ್‌ಬಿಐ ವರದಿ

ಆರ್‌ಬಿಐ ಲಾಭಾಂಶ: ವಿತ್ತೀಯ ಕೊರತೆ ತಗ್ಗಿಸಲು ಸಹಕಾರಿ– ಎಸ್‌ಬಿಐ ವರದಿ

ಪಿಟಿಐ
Published 25 ಮೇ 2025, 15:48 IST
Last Updated 25 ಮೇ 2025, 15:48 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಕೇಂದ್ರ ಸರ್ಕಾರಕ್ಕೆ ₹2.69 ಲಕ್ಷ ಕೋಟಿ ಲಾಭಾಂಶ ನೀಡುತ್ತಿದೆ. ಇದು ಸರ್ಕಾರದ ಹಣಕಾಸಿನ ಸ್ಥಿತಿಯನ್ನು ಸರಾಗಗೊಳಿಸಲು ಹಾಗೂ ಆರ್ಥಿಕತೆ ಬೆಳವಣಿಗೆಗೆ ನೆರವಾಗಲಿದೆ ಎಂದು ಎಸ್‌ಬಿಐ ಸಂಶೋಧನಾ ವರದಿ ತಿಳಿಸಿದೆ.

ಆರ್‌ಬಿಐ ಮತ್ತು ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಗಳಿಂದ ₹2.56 ಲಕ್ಷ ಕೋಟಿ ಲಾಭಾಂಶ ನಿರೀಕ್ಷಿಸಿರುವ ಕುರಿತು, 2025–26ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಸ್ತಾಪಿಸಿದ್ದರು. ಬಜೆಟ್‌ನಲ್ಲಿ ಅಂದಾಜಿಸಿದ್ದಕ್ಕಿಂತಲೂ ಹೆಚ್ಚಿನ ಮೊತ್ತದ ಲಾಭಾಂಶವನ್ನು ಆರ್‌ಬಿಐ ನೀಡುತ್ತಿದೆ. 

ಸರ್ಕಾರದ ಬೊಕ್ಕಸಕ್ಕೆ ಪಾವತಿಯಾಗುತ್ತಿರುವ ಈ ದಾಖಲೆ ಮೊತ್ತದ ಲಾಭಾಂಶವು ವಿತ್ತೀಯ ಕೊರತೆಯನ್ನು ತಗ್ಗಿಸಲು ನೆರವಾಗಲಿದೆ ಎಂದು ವರದಿ ಹೇಳಿದೆ.

ADVERTISEMENT

ಪ್ರಸಕ್ತ ಆರ್ಥಿಕ  ವರ್ಷದಲ್ಲಿ  ವಿತ್ತೀಯ ಕೊರತೆಯನ್ನು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 4.2ರಷ್ಟಕ್ಕೆ ನಿಗದಿ‍‍ಪಡಿಸಲಾಗಿದೆ. ಇದರಲ್ಲಿ ಶೇ 0.20ರಷ್ಟು ತಗ್ಗಲಿದೆ. ಅಲ್ಲದೆ, ಈ ಆರ್ಥಿಕ ವರ್ಷದಲ್ಲಿ ಸರ್ಕಾರವು ಹೆಚ್ಚುವರಿಯಾಗಿ ₹70 ಸಾವಿರ ಕೋಟಿ ವೆಚ್ಚ ಮಾಡಲು ನೆರವಾಗಲಿದೆ ಎಂದು ಹೇಳಿದೆ. 

2024–25ರಲ್ಲಿ ಆರ್‌ಬಿಐ, ಸರ್ಕಾರಕ್ಕೆ ₹2.10 ಲಕ್ಷ ಕೋಟಿ ಲಾಭಾಂಶ ನೀಡಿತ್ತು.

ಲಾಭಾಂಶ ಪಾವತಿ ಮೊತ್ತವು ಏರಿಕೆಯಾಗಿರುವುದು ವಿದೇಶಿ ವಿನಿಮಯ ಮೀಸಲು ಸಂಗ್ರಹದ ಹೆಚ್ಚಳಕ್ಕೂ ನೆರವಾಗಲಿದೆ. ಆರ್‌ಬಿಐನ ಬಡ್ಡಿ ವರಮಾನವನ್ನೂ ಹೆಚ್ಚಿಸಲಿದೆ ಎಂದು ಹೇಳಿದೆ.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ವಿದೇಶಿ ವಿನಿಮಯ ಮೀಸಲು ಸಂಗ್ರಹವು ₹60 ಲಕ್ಷ ಕೋಟಿಗೆ ತಲುಪಿದ್ದು, ದಾಖಲಾಗಿತ್ತು. ಆದರೆ, ಜಾಗತಿಕ ಆರ್ಥಿಕ ಅನಿಶ್ಚಿತತೆಯಿಂದಾಗಿ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯವು ದುರ್ಬಲಗೊಂಡಿತ್ತು. ರೂಪಾಯಿ ಸ್ಥಿರತೆಗಾಗಿ ಡಾಲರ್‌ಗಳ ಮಾರಾಟಕ್ಕೆ ಆರ್‌ಬಿಐ ಮುಂದಾಗಿದ್ದರಿಂದ ಮೀಸಲು ಸಂಗ್ರಹ ಪ್ರಮಾಣ ಕಡಿಮೆಯಾಯಿತು ಎಂದು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.