ADVERTISEMENT

ಇ–ಖಾತಾ ವಿಳಂಬದಿಂದ ಸಮಸ್ಯೆ: ಕ್ರೆಡಾಯ್‌

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 14:22 IST
Last Updated 8 ಅಕ್ಟೋಬರ್ 2025, 14:22 IST
ಕ್ರೆಡಾಯ್‌ನ ಕಾರ್ಯದರ್ಶಿ ಮಹಾವೀರ ಎಸ್‌. ಮೆಹ್ತಾ, ಅಧ್ಯಕ್ಷ ಭಾಸ್ಕರ್ ಟಿ. ನಾಗೇಂದ್ರಪ್ಪ, ಜಂಟಿ ಕಾರ್ಯದರ್ಶಿ ಮಮತಾ ಭಾರಕ್ತಿಯ, ಸಿಇಒ ಅನಿಲ್ ನಾಯಕ್ ಸುದ್ದಿಗೋಷ್ಠಿಯಲ್ಲಿ ಇದ್ದರು
ಕ್ರೆಡಾಯ್‌ನ ಕಾರ್ಯದರ್ಶಿ ಮಹಾವೀರ ಎಸ್‌. ಮೆಹ್ತಾ, ಅಧ್ಯಕ್ಷ ಭಾಸ್ಕರ್ ಟಿ. ನಾಗೇಂದ್ರಪ್ಪ, ಜಂಟಿ ಕಾರ್ಯದರ್ಶಿ ಮಮತಾ ಭಾರಕ್ತಿಯ, ಸಿಇಒ ಅನಿಲ್ ನಾಯಕ್ ಸುದ್ದಿಗೋಷ್ಠಿಯಲ್ಲಿ ಇದ್ದರು   

ಬೆಂಗಳೂರು: ‘ಇ–ಖಾತಾ ನೀಡುವಲ್ಲಿ ವಿಳಂಬ ಸೇರಿದಂತೆ ಸರ್ಕಾರದ ಕೆಲ ನಿಯಮಗಳಿಂದ ಕಟ್ಟಡಗಳಿಗೆ ಅನುಮೋದನೆ ದೊರೆಯಲು ವಿಳಂಬವಾಗುತ್ತಿದೆ. ಇದರಿಂದಾಗಿ ಮನೆ ಖರೀದಿಸಲು ಬಯಸುವವರು ಖರೀದಿಯಿಂದ ದೂರ ಸರಿಯುತ್ತಿದ್ದಾರೆ. ಸರ್ಕಾರ ತ್ವರಿತಗತಿಯಲ್ಲಿ ಅನುಮೋದನೆ ನೀಡುವಂತಾದರೆ ರಿಯಲ್‌ ಎಸ್ಟೇಟ್‌ ವಲಯಕ್ಕೆ ಅನುಕೂಲ ಆಗಲಿದೆ’ ಎಂದು ಕ್ರೆಡಾಯ್‌ ಕರ್ನಾಟಕದ ಅಧ್ಯಕ್ಷ ಭಾಸ್ಕರ್ ಟಿ. ನಾಗೇಂದ್ರಪ್ಪ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೆಪೊ ದರ ಶೇ 1ರಷ್ಟು ಇಳಿದಿದೆ. ಜಿಎಸ್‌ಟಿ ಪರಿಷ್ಕರಣೆಯಿಂದ ಸಿಮೆಂಟ್‌ ಸೇರಿ ನಿರ್ಮಾಣ ಚಟುವಟಿಕೆಗಳಿಗೆ ಬಳಸುವ ಕೆಲವು ವಸ್ತುಗಳ ಬೆಲೆ ಕಡಿಮೆ ಆಗಿದೆ. ಆದರೆ, ಇತ್ತೀಚೆಗೆ ಕರ್ನಾಟಕದಲ್ಲಿ ಮುದ್ರಾಂಕ ಶುಲ್ಕ ಹೆಚ್ಚಳ ಮಾಡಲಾಗಿದೆ. ಹೀಗಾಗಿ, ರೆಪೊ ದರ ಇಳಿಕೆ ಮತ್ತು ಜಿಎಸ್‌ಟಿ ಪರಿಷ್ಕರಣೆ ಪ್ರಯೋಜನವು ರಾಜ್ಯದಲ್ಲಿ ಮನೆ ಖರೀದಿಸುವವರಿಗೆ ದೊರೆಯದಂತಾಗಿದೆ’ ಎಂದು ಹೇಳಿದರು.

ರಾಜ್ಯದ ಎರಡನೇ ಹಂತದ ನಗರಗಳು ಬೆಳವಣಿಗೆಯ ಮುಂದಿನ ಚಾಲಕ ಶಕ್ತಿಗಳಾಗಿ ಹೊರಹೊಮ್ಮುತ್ತಿದ್ದು, ವಸತಿ ಯೋಜನೆಗಳಿಗೆ ಉತ್ತಮ ಬೇಡಿಕೆ ಇದೆ. ಕೈಗಾರಿಕೆ ಮತ್ತು ಐ.ಟಿ ಕ್ಷೇತ್ರದ ವಿಸ್ತರಣೆಯಿಂದ ಮಂಗಳೂರು ರಾಜ್ಯದ ಎರಡನೇ ಅತಿದೊಡ್ಡ ರಿಯಲ್ ಎಸ್ಟೇಟ್ ಮಾರುಕಟ್ಟೆಯಾಗಿ ಮುನ್ನಡೆ ಸಾಧಿಸುತ್ತಿದೆ. ಮೈಸೂರಿನಲ್ಲಿ ಪ್ರವಾಸೋದ್ಯಮ, ಬೆಳಗಾವಿಯಲ್ಲಿ ಹೊಸ ಕೈಗಾರಿಕಾ ಪಾರ್ಕ್‌ಗಳಿಂದ ರಿಯಲ್ ಎಸ್ಟೇಟ್ ವಲಯಕ್ಕೆ ಬೇಡಿಕೆ ಹೆಚ್ಚಳವಾಗಿದೆ. ಹುಬ್ಬಳ್ಳಿ, ಬಳ್ಳಾರಿ, ಬಾಗಲಕೋಟೆ, ಗದಗ, ರಾಯಚೂರು ನಗರಗಳಲ್ಲಿ ಮೂಲಸೌಕರ್ಯದ ಅಭಿವೃದ್ಧಿಯಿಂದ ವಸತಿ ಯೋಜನೆಗಳಿಗೆ ಉತ್ತಮ ಬೇಡಿಕೆ ಇದೆ ಎಂದರು.

ADVERTISEMENT

₹1 ಕೋಟಿ ಆಸುಪಾಸು ಇರುವ ಮೌಲ್ಯದ ಮನೆಗೆ ಜನರಿಂದ ಹೆಚ್ಚಿನ ಬೇಡಿಕೆ ಇದೆ. ರಾಯಚೂರಿನಲ್ಲಿ ₹2.8 ಕೋಟಿ ಮೌಲ್ಯದ ಮನೆ ಸಿದ್ಧವಾಗುತ್ತಿದೆ. ಇದು ರಾಜ್ಯದಲ್ಲಿ ಎರಡನೇ ಹಂತದ ನಗರಗಳ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ಹೇಳಿದರು. 

10ರಿಂದ ರಿಯಾಲ್ಟಿ ಎಕ್ಸ್‌ಪೋ

ಅಕ್ಟೋಬರ್‌ 10ರಿಂದ 12ರವರೆಗೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಕರ್ನಾಟಕ ವ್ಯಾಪಾರ ಉತ್ತೇಜನ ಸಂಸ್ಥೆಯಲ್ಲಿ (ಕೆಟಿಪಿಒ) ಕ್ರೆಡಾಯ್‌ ರಿಯಾಲ್ಟಿ ಎಕ್ಸ್‌ಪೋ–2025 ಹಮ್ಮಿಕೊಳ್ಳಲಾಗಿದೆ ಎಂದು ನಾಗೇಂದ್ರಪ್ಪ ಹೇಳಿದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇದು ಅತ್ಯಂತ ದೊಡ್ಡ ಎಕ್ಸ್‌ಪೋ ಆಗಿರಲಿದೆ. ಪ್ರಮುಖ ಡೆವಲಪರ್‌ಗಳು, ಬ್ಯಾಂಕ್‌ಗಳು ಮತ್ತು ವಸತಿ ಹಣಕಾಸು ಕಂಪನಿಗಳು ಎಕ್ಸ್‌ಪೋದಲ್ಲಿ ಭಾಗವಹಿಸಲಿವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.