ADVERTISEMENT

ಆರ್‌ಐಎಲ್‌ ಮೌಲ್ಯ ₹ 10 ಲಕ್ಷ ಕೋಟಿ

ಪಿಟಿಐ
Published 28 ನವೆಂಬರ್ 2019, 19:14 IST
Last Updated 28 ನವೆಂಬರ್ 2019, 19:14 IST
Reliance_Industries
Reliance_Industries   

ನವದೆಹಲಿ: ಷೇರುಪೇಟೆಯಲ್ಲಿ ₹ 10 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ಹೊಂದಿದ ಭಾರತದ ಮೊದಲ ಕಂಪನಿಯಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (ಆರ್‌ಐಎಲ್‌) ಹೊರಹೊಮ್ಮಿದೆ.

ಮುಂಬೈ ಷೇರುಪೇಟೆಯ ಗುರುವಾರದ ವಹಿವಾಟಿನಲ್ಲಿ ಕಂಪನಿಯ ಪ್ರತಿ ಷೇರಿನ ಬೆಲೆ ಶೇ 0.65ರಷ್ಟು ಏರಿಕೆಯಾಗಿ ₹ 1,579.95ಕ್ಕೆ ತಲುಪಿತು. ಮಧ್ಯಂತರ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ
₹ 1,584ಕ್ಕೂ ಏರಿಕೆ ಕಂಡಿತ್ತು.

ಎನ್‌ಎಸ್‌ಇನಲ್ಲಿ ಪ್ರತಿ ಷೇರಿನ ಬೆಲೆ ಶೇ 0.77ರಷ್ಟು ಹೆಚ್ಚಾಗಿ ₹ 1,582ಕ್ಕೆ ತಲುಪಿತು.

ADVERTISEMENT

ಬಿಎಸ್‌ಇನಲ್ಲಿ 2.73 ಲಕ್ಷ ಷೇರುಗಳು ಹಾಗೂ ಎನ್‌ಎಸ್‌ಇನಲ್ಲಿ 62 ಲಕ್ಷಕ್ಕೂ ಅಧಿಕ ಷೇರುಗಳು ವಹಿವಾಟು ನಡೆಸಿದವು.ಕಂಪನಿ ಷೇರು, 2019ರಲ್ಲಿ ಇದುವರೆಗಿನ ವಹಿವಾಟಿನಲ್ಲಿ ಶೇ 41ರಷ್ಟು ಏರಿಕೆ ಕಂಡುಕೊಂಡಿದೆ.

₹ 7.79 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ಹೊಂದುವ ಮೂಲಕ ಟಿಸಿಎಸ್‌ ಎರಡನೆ ಸ್ಥಾನದಲ್ಲಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌, ಹಿಂದುಸ್ಥಾನ್‌ ಯೂನಿಲಿವರ್‌ ಮತ್ತು ಎಚ್‌ಡಿಎಫ್‌ಸಿ ನಂತರದ ಸ್ಥಾನದಲ್ಲಿವೆ.

ದಿನದ ವಹಿವಾಟಿನಲ್ಲಿ ಕಂಪನಿಗಳ ಷೇರಿನ ಬೆಲೆಯಲ್ಲಿ ಆಗುವ ಏರಿಳಿತದ ಆಧಾರದ ಮೇಲೆ ಮಾರುಕಟ್ಟೆ ಮೌಲ್ಯದಲ್ಲಿಯೂ ಏರಿಳಿತ ಆಗುತ್ತದೆ.

ಅಂಬಾನಿ ಸಂಪತ್ತಿನಲ್ಲಿಯೂ ಏರಿಕೆ

ರಿಲಯನ್ಸ್‌ ಇಂಡಸ್ಟ್ರೀಸ್‌ನ ಮಾರುಕಟ್ಟೆ ಮೌಲ್ಯ ಹೆಚ್ಚಾಗುತ್ತಿದ್ದಂತೆಯೇಏಷ್ಯಾದ ಸಿರಿವಂತ ಉದ್ಯಮಿ ಮುಕೇಶ್‌ ಅಂಬಾನಿ ಅವರ ಸಂಪತ್ತಿನಲ್ಲಿಯೂ ಒಂದೇ ದಿನ ₹ 3,800 ಕೋಟಿಗಳಷ್ಟು ಏರಿಕೆಯಾಗಿದೆ.

ಒಟ್ಟಾರೆ ಸಂಪತ್ತಿನ ಮೌಲ್ಯವು ₹ 4.30 ಲಕ್ಷ ಕೋಟಿಗೆ ತಲುಪಿದೆ ಎಂದು ಬ್ಲೂಮ್‌ಬರ್ಗ್‌ ಸಿರಿವಂತರ ಪಟ್ಟಿಯಲ್ಲಿ ತಿಳಿಸಲಾಗಿದೆ.

2019ರಲ್ಲಿ ಇದುವರೆಗೆ ಅವರ ಸಂಪತ್ತಿನಲ್ಲಿ ₹ 1.2 ಲಕ್ಷ ಕೋಟಿಗಳಷ್ಟು ಏರಿಕೆಯಾಗಿದೆ. ವಿಶ್ವದ ಸಿರಿವಂತರ ಪ್ರಮುಖ 10ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 2019ರಲ್ಲಿ ಇದುವರೆಗೆ ಸಂಪತ್ತಿನಲ್ಲಿ ಗರಿಷ್ಠ ಏರಿಕೆ ಕಂಡಿರುವ ಸಿರಿವಂತರಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.