ನವದೆಹಲಿ: 2024–25ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯು, ₹19,407 ಕೋಟಿ ನಿವ್ವಳ ಲಾಭ ಗಳಿಸಿದೆ.
2023–24ನೇ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ನಿವ್ವಳ ಲಾಭದಲ್ಲಿ ಶೇ 2.4ರಷ್ಟು ಹೆಚ್ಚಳವಾಗಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯು ₹2.88 ಲಕ್ಷ ಕೋಟಿ ವರಮಾನ ಗಳಿಸಿದೆ. ಒಟ್ಟಾರೆ ವರಮಾನದಲ್ಲಿ ಶೇ 8.8ರಷ್ಟು ಹೆಚ್ಚಳವಾಗಿದೆ ಎಂದು ಕಂಪನಿಯು, ಷೇರುಪೇಟೆಗೆ ಮಾಹಿತಿ ನೀಡಿದೆ.
ಅಲ್ಲದೆ, ನಿವ್ವಳ ಮೌಲ್ಯ ₹10 ಲಕ್ಷ ಕೋಟಿ ದಾಟಿದ ದೇಶದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ರಿಲಯನ್ಸ್ ಇಂಡಸ್ಟ್ರೀಸ್ ಭಾಜನವಾಗಿದೆ. ಪ್ರತಿ ಷೇರಿಗೆ ₹5.50 ಲಾಭಾಂಶ ನೀಡಲು ಆಡಳಿತ ಮಂಡಳಿಯು ಅನುಮೋದನೆ ನೀಡಿದೆ. ಅಲ್ಲದೆ, ಪರಿವರ್ತಿಸಲಾಗದ ಸಾಲಪತ್ರಗಳ (ಎನ್‌ಸಿಡಿ) ವಿತರಣೆ ಮೂಲಕ ₹25 ಸಾವಿರ ಕೋಟಿ ಸಂಗ್ರಹಿಸಲು ನಿರ್ಧರಿಸಿದೆ.
‘ಇಂಧನ ಮಾರುಕಟ್ಟೆಯಲ್ಲಿನ ಏರಿಳಿತದ ಹೊರತಾಗಿಯೂ ತೈಲದಿಂದ ರಾಸಾಯನಿಕ ವ್ಯವಹಾರದಲ್ಲಿ ಸ್ಥಿರವಾದ ಫಲಿತಾಂಶ ದಾಖಲಿಸಲಾಗಿದೆ. ಸಂಯೋಜಿತ ವ್ಯವಹಾರಗಳ ಕಾರ್ಯಾಚರಣೆಯು ಸದೃಢವಾಗಿದೆ. ಇದೇ ಲಾಭದ ಪ್ರಮಾಣ ಏರಿಕೆಗೆ ಕಾರಣ’ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.