ನವದೆಹಲಿ/ಸಿಡ್ನಿ): ಭಾರತದ ದೂರಸಂಪರ್ಕ ಹಾಗೂ ಡಿಜಿಟಲ್ ಸೇವಾ ವಲಯದ ದೈತ್ಯ ಕಂಪನಿ ರಿಲಯನ್ಸ್ ಜಿಯೊ ಪ್ಲ್ಯಾಟ್‌ಫಾರ್ಮ್ಸ್ ತನ್ನ ಆರಂಭಿಕ ಷೇರು ನೀಡಿಕೆಯನ್ನು (ಐಪಿಒ) ಈ ವರ್ಷ ನಡೆಸದೆ ಇರಲು ತೀರ್ಮಾನಿಸಿದೆ.
ಮಾರುಕಟ್ಟೆ ತಜ್ಞರು ಜಿಯೊ ಮೌಲ್ಯವು 100 ಬಿಲಿಯನ್ ಡಾಲರ್ (ಸರಿಸುಮಾರು ₹8.57 ಲಕ್ಷ ಕೋಟಿ) ಎಂದು ಅಂದಾಜಿಸಿದ್ದಾರೆ. ಇನ್ನಷ್ಟು ಹೆಚ್ಚಿನ ವರಮಾನ, ಇನ್ನಷ್ಟು ಹೆಚ್ಚಿನ ಚಂದಾದಾರರನ್ನು ಹೊಂದುವ ಬಯಕೆಯು ಜಿಯೊ ಕಂಪನಿಗೆ ಇದೆ. ಡಿಜಿಟಲ್ ಸೇವೆಗಳನ್ನು ಇನ್ನಷ್ಟು ವಿಸ್ತರಿಸುವ ಬಯಕೆಯೂ ಅದಕ್ಕೆ ಇದೆ. ಹೀಗೆ ಮಾಡಿದಾಗ ಐಪಿಒ ಪ್ರಕ್ರಿಯೆಗೆ ಮೊದಲು ಕಂಪನಿಯ ಮೌಲ್ಯವು ಇನ್ನಷ್ಟು ಹೆಚ್ಚಾಗುತ್ತದೆ ಎನ್ನುವ ಲೆಕ್ಕಾಚಾರ ಇದೆ ಎಂದು ಮೂಲಗಳು ಹೇಳಿವೆ.
ಜಿಯೊ ಪ್ಲ್ಯಾಟ್‌ಫಾರ್ಮ್ಸ್‌ನ ಶೇಕಡ 80ರಷ್ಟು ವರಮಾನವು ದೂರಸಂಪರ್ಕ ವಹಿವಾಟಿನಿಂದ ಬಂದಿದೆ. ಜಿಯೊ ಕಂಪನಿಯಲ್ಲಿ ಗೂಗಲ್ ಮತ್ತು ಮೆಟಾ ಕೂಡ ಹೂಡಿಕೆ ಮಾಡಿವೆ. ಅಲ್ಲದೆ, ಜಿಯೊ ಕಂಪನಿಯು ಕೃತಕ ಬುದ್ಧಿಮತ್ತೆ (ಎ.ಐ) ಮೂಲಸೌಕರ್ಯಕ್ಕಾಗಿ ಎನ್‌ವಿಡಿಯಾ ಕಂಪನಿಯ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.ಜಿಯೊ ಕಂಪನಿಯು ಐದು ವರ್ಷಗಳಲ್ಲಿ ಷೇರುಪೇಟೆಯಲ್ಲಿ ನೋಂದಣಿ ಆಗುವತ್ತ ಸಾಗಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಅವರು 2019ರಲ್ಲಿ ಹೇಳಿದ್ದರು.
‘ಜಿಯೊ ಐಪಿಒ ಈ ವರ್ಷ ನಡೆಯುವುದಿಲ್ಲ. ಅದು ಸಾಧ್ಯವಿಲ್ಲ. ವಹಿವಾಟುಗಳು ಇನ್ನಷ್ಟು ಪಕ್ವಗೊಳ್ಳಬೇಕು ಎಂದು ಕಂಪನಿ ಬಯಸುತ್ತಿದೆ’ ಎಂದು ಮೂಲವು ವಿವರಿಸಿದೆ. ಈ ವಿಚಾರವಾಗಿ ಸುದ್ದಿಸಂಸ್ಥೆಗೆ ರಿಲಯನ್ಸ್ ಕಡೆಯಿಂದ ಪ್ರತಿಕ್ರಿಯೆ ಸಿಕ್ಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.