ADVERTISEMENT

ಕೋವಿಡ್–19 ಪಿಡುಗು ಪರಿಣಾಮ: ಭಾರತೀಯರು ತಾಯ್ನಾಡಿಗೆ ರವಾನಿಸುವ ಹಣದಲ್ಲಿ ಕಡಿತ

ಶೇ 23ರಷ್ಟು ಕಡಿತ: ವಿಶ್ವಬ್ಯಾಂಕ್‌ ವರದಿ

ಪಿಟಿಐ
Published 23 ಏಪ್ರಿಲ್ 2020, 20:02 IST
Last Updated 23 ಏಪ್ರಿಲ್ 2020, 20:02 IST
   
""

ವಾಷಿಂಗ್ಟನ್‌ (ಪಿಟಿಐ): ವಿದೇಶಗಳಲ್ಲಿ ದುಡಿಯುತ್ತಿರುವ ಭಾರತೀಯರು ತಾಯ್ನಾಡಿಗೆ ರವಾನಿಸುವ ಹಣದ ಮೊತ್ತವು ಈ ವರ್ಷ ಶೇ 23ರಷ್ಟು ಕಡಿಮೆಯಾಗಲಿದೆ ಎಂದು ವಿಶ್ವ ಬ್ಯಾಂಕ್‌ ಅಂದಾಜಿಸಿದೆ.

ಕುಟುಂಬದ ಸದಸ್ಯರು ವಿದೇಶಗಳಿಂದ ಭಾರತಕ್ಕೆ ಕಳಿಸುವ ಹಣದ ಮೊತ್ತವು ಹಿಂದಿನ ವರ್ಷ ₹ 5.81 ಲಕ್ಷ ಕೋಟಿಗಳಷ್ಟಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಶೇ 23ರಷ್ಟು ಕಡಿಮೆಯಾಗಿ ₹ 4.40 ಲಕ್ಷ ಕೋಟಿಗೆ ಇಳಿಯಲಿದೆ. 2019ರಲ್ಲಿ ಹಣದ ರವಾನೆ ಪ್ರಮಾಣದಲ್ಲಿ ಶೇ 5.5ರಷ್ಟು ಹೆಚ್ಚಳ ಕಂಡು ಬಂದಿತ್ತು.

‘ಕೊರೊನಾ–2’ ವೈರಸ್‌ ಪಿಡುಗು ತಂದೊಡ್ಡಿರುವ ಬಿಕ್ಕಟ್ಟಿನಿಂದಾಗಿ ಜಾಗತಿಕ ಆರ್ಥಿಕತೆಯಲ್ಲಿ ಹಿಂಜರಿತ ಕಂಡು ಬರಲಿದೆ. ಅದರ ಫಲವಾಗಿ ಭಾರತೀಯರು ಸ್ವದೇಶಕ್ಕೆ ರವಾನಿಸುವ ಹಣದ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಲಿದೆ.

ADVERTISEMENT

ಆರ್ಥಿಕ ಬಿಕ್ಕಟ್ಟಿನಿಂದಾಗಿ ಈ ಬಗೆಯಲ್ಲಿ ಹಣ ರವಾನಿಸುವ ಜಾಗತಿಕ ಮೊತ್ತವು ಶೇ 20ರಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ. ವಲಸೆ ಮತ್ತು ವಲಸಿಗರು ತಮ್ಮ ಕುಟುಂಬಗಳಿಗೆ ಕಳಿಸುವ ಹಣಕ್ಕೆ ಸಂಬಂಧಿಸಿದ ವಿಶ್ವಬ್ಯಾಂಕ್‌ ವರದಿಯಲ್ಲಿ ಈ ವಿವರಗಳಿವೆ.

ಹಣ ರವಾನೆಯಲ್ಲಿ ಕಂಡು ಬರಲಿರುವ ಕುಸಿತದ ಅಂದಾಜು ಇತ್ತೀಚಿನ ವರ್ಷಗಳಲ್ಲಿಯೇ ಗರಿಷ್ಠ ಮಟ್ಟದಲ್ಲಿ ಇದೆ. ವಲಸೆ ಕಾರ್ಮಿಕರ ಉದ್ಯೋಗ ಅವಕಾಶಗಳು ಮತ್ತು ವೇತನ ಕಡಿತದ ಫಲವಾಗಿ ಹಣದ ರವಾನೆಯಲ್ಲಿ ಇಳಿಕೆ ಕಂಡು ಬರಲಿದೆ.

ಸಿರಿವಂತ ದೇಶಗಳಲ್ಲಿ ದುಡಿಯುವವರು ಕಳಿಸುವ ಹಣವು ಕುಟುಂಬಗಳ ಆಹಾರ, ವೈದ್ಯಕೀಯ ವೆಚ್ಚ ಮತ್ತಿತರ ಮೂಲ ಅಗತ್ಯಗಳನ್ನು ಈಡೇರಿಸಿಕೊಳ್ಳಲು ನೆರವಾಗುತ್ತದೆ.

ವಿಶ್ವದ ಎಲ್ಲ ಭಾಗಗಳಲ್ಲಿ ಹಣದ ರವಾನೆ ಪ್ರಮಾಣವು ಈ ವರ್ಷ ಗಮನಾರ್ಹವಾಗಿ ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದ ಅಭಿವೃದ್ಧಿಶೀಲ ದೇಶಗಳ ಆರ್ಥಿಕತೆ ಮೇಲೆಯೂ ವ್ಯತಿರಿಕ್ತ ಪರಿಣಾಮ ಕಂಡು ಬರಲಿದೆ ಎಂದು ವಿಶ್ವಬ್ಯಾಂಕ್‌ ಕಳವಳ ವ್ಯಕ್ತಪಡಿಸಿದೆ.

ಹಿಂದಿನ ವರ್ಷ ಕುಟುಂಬ ಸದಸ್ಯರಿಂದ ಸ್ವದೇಶಕ್ಕೆ ರವಾನೆಯಾಗಿದ್ದ ಮೊತ್ತವು ವಿದೇಶಿ ನೇರ ಹೂಡಿಕೆಗಿಂತ (ಎಫ್‌ಡಿಐ) ಹೆಚ್ಚಿಗೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.