
ಮುಂಬೈ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರವನ್ನು ಶೇಕಡ 0.25ರಷ್ಟು ಕಡಿಮೆ ಮಾಡಿದ್ದು, ಇದರ ಪರಿಣಾಮವಾಗಿ ಗೃಹಸಾಲ, ವಾಹನ ಸಾಲ ಮತ್ತು ಇತರ ಸಾಲಗಳ ಮೇಲಿನ ಬಡ್ಡಿಯ ಹೊರೆ ತುಸು ಇಳಿಕೆಯಾಗುವ ನಿರೀಕ್ಷೆ ಇದೆ.
ಆರ್‌ಬಿಐ ಆರು ತಿಂಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ರೆಪೊ ದರ ತಗ್ಗಿಸಿದೆ. ದೇಶದ ಅರ್ಥ ವ್ಯವಸ್ಥೆಯು ಬಹಳ ಉತ್ತಮವಾದ ಸ್ಥಿತಿಯಲ್ಲಿ ಇದ್ದು, ಇದಕ್ಕೆ ಬೆಂಬಲವಾಗಿ ನಿಲ್ಲಲು ಬ್ಯಾಂಕಿಂಗ್ ವ್ಯವಸ್ಥೆಗೆ ಹೆಚ್ಚಿನ ನಗದು ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಆರ್‌ಬಿಐ ಹೇಳಿದೆ.
ರೆಪೊ ದರವನ್ನು ತೀರ್ಮಾನಿಸುವ, ಆರು ಜನ ಸದಸ್ಯರ ಹಣಕಾಸು ನೀತಿ ಸಮಿತಿಯು (ಎಂಪಿಸಿ) ದರ ಇಳಿಕೆಗೆ ಸರ್ವಾನುಮತದಿಂದ ಒಪ್ಪಿಗೆ ನೀಡಿದೆ. ಸಮಿತಿಗೆ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರ ಮುಖ್ಯಸ್ಥರು. ಈ ಇಳಿಕೆಯೊಂದಿಗೆ ರೆಪೊ ದರವು ಶೇ 5.25ರಷ್ಟು ಆಗಿದೆ.
ಆರ್‌ಬಿಐ ‘ತಟಸ್ಥ’ ಹಣಕಾಸು ನಿಲುವನ್ನು ಕಾಯ್ದುಕೊಂಡಿದೆ, ಮುಂದೆಯೂ ರೆಪೊ ದರ ಇಳಿಕೆಗೆ ಅವಕಾಶ ಉಳಿಸಿಕೊಂಡಿದೆ.
ಅಮೆರಿಕವು ಭಾರತದ ಸರಕುಗಳ ಮೇಲೆ ಶೇ 50ರಷ್ಟು ಸುಂಕ ವಿಧಿಸಿದ ಪರಿಣಾಮವಾಗಿ ಆರ್ಥಿಕತೆಯ ಮೇಲೆ ಆಗಿರುವ ಕೆಟ್ಟ ಪರಿಣಾಮವನ್ನು ನಿಭಾಯಿಸುವ ಉದ್ದೇಶದೊಂದಿಗೆ ಆರ್‌ಬಿಐ ರೆಪೊ ದರ ಇಳಿಸಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಜಿಎಸ್‌ಟಿ ದರ ಪರಿಷ್ಕರಣೆ, ಕಾರ್ಮಿಕ ನಿಯಮಗಳಲ್ಲಿ ಬದಲಾವಣೆ, ಹಣಕಾಸು ವಲಯಕ್ಕೆ ಸಂಬಂಧಿಸಿದ ನಿಯಮಗಳನ್ನು ಸುಲಭವಾಗಿಸುವ ಮೂಲಕ ಕೇಂದ್ರ ಸರ್ಕಾರವು ಅರ್ಥ ವ್ಯವಸ್ಥೆಯ ಉತ್ತೇಜನಕ್ಕೆ ಒಂದಿಷ್ಟು ಕ್ರಮ ಕೈಗೊಂಡಿದೆ. ಅದಕ್ಕೆ ಪೂರಕವಾಗಿ ರೆಪೊ ದರ ಇಳಿಕೆ ಮಾಡಲಾಗಿದೆ ಎಂದೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರೆಪೊ ದರ ಇಳಿಕೆಯ ಪ್ರಯೋಜನವನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ವರ್ಗಾವಣೆ ಮಾಡಿದ ನಂತರದಲ್ಲಿ ವಿವಿಧ ಬಗೆಯ ಸಾಲಗಳ ಮೇಲಿನ ಇಎಂಐ ಮೊತ್ತವು ಕಡಿಮೆ ಆಗಲಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ ಹಣದುಬ್ಬರ ಪ್ರಮಾಣವು ಶೇ 2.2ರಷ್ಟು ಇದೆ. ಈ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ದರವು ಶೇ 8ರಷ್ಟು ಆಗಿದೆ. ಇದು ಅರ್ಥ ವ್ಯವಸ್ಥೆಯು ಬಹಳ ಉತ್ತಮ ಸ್ಥಿತಿಯಲ್ಲಿರುವುದನ್ನು ಹೇಳುತ್ತಿದೆ ಎಂದು ಮಲ್ಹೋತ್ರಾ ಅವರು ಸುದ್ದಿಗಾರರಿಗೆ ತಿಳಿಸಿದರು.
ಇಡೀ ಹಣಕಾಸು ವರ್ಷದಲ್ಲಿ ಹಣದುಬ್ಬರ ಪ್ರಮಾಣವು ಶೇ 2ರಷ್ಟು ಮಾತ್ರ ಇರಲಿದೆ ಎಂದು ಆರ್‌ಬಿಐ ಅಂದಾಜು ಮಾಡಿದೆ. ಅಲ್ಲದೆ, ದೇಶದ ಜಿಡಿಪಿ ಬೆಳವಣಿಗೆ ಪ್ರಮಾಣವು ಶೇ 7.3ರಷ್ಟು ಆಗಲಿದೆ ಎಂದು ಕೂಡ ಅದು ಅಂದಾಜಿಸಿದೆ.
ರೆಪೊ ದರ ಇಳಿಕೆಯು ಮುಂದಿನ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ನಿರೀಕ್ಷೆ ಇದೆ. ಏಕೆಂದರೆ ಹಣಕಾಸು ನೀತಿಗಳಿಗೆ ಸಂಬಂಧಿಸಿದ ನಿರ್ಣಯಗಳ ಪರಿಣಾಮವು ಸಾಮಾನ್ಯವಾಗಿ ವಿಳಂಬವಾಗಿ ಕಾಣಿಸಿಕೊಳ್ಳುತ್ತದೆ.ಧರ್ಮಕೀರ್ತಿ ಜೋಷಿ ಕ್ರಿಸಿಲ್ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.