ADVERTISEMENT

ಅಂಕೆ ಮೀರಿದ ಚಿಲ್ಲರೆ ಹಣದುಬ್ಬರ

ಬೆಲೆ ನಿಯಂತ್ರಣಕ್ಕೆ ಏನು ಕ್ರಮ ಎಂಬುದನ್ನು ತಿಳಿಸಬೇಕಿದೆ ಆರ್‌ಬಿಐ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 19:36 IST
Last Updated 12 ಅಕ್ಟೋಬರ್ 2022, 19:36 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ (ಪಿಟಿಐ): ಆಹಾರ ವಸ್ತುಗಳ ಬೆಲೆ ಏರಿಕೆಯು ಸೆಪ್ಟೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ದರವನ್ನು ಐದು ತಿಂಗಳ ಗರಿಷ್ಠ ಮಟ್ಟವಾದ ಶೇಕಡ 7.4ಕ್ಕೆ ಹೆಚ್ಚಿಸಿದೆ. ಈ ನಡುವೆ ದೇಶದ ಕೈಗಾರಿಕಾ ಉತ್ಪಾದನೆಯ ಪ್ರಮಾಣವು 18 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಕುಸಿದಿದೆ.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ದರವು ಸತತ ಎರಡನೆಯ ತಿಂಗಳಿನಲ್ಲಿಯೂ ಏರಿಕೆಯ ಹಾದಿಯಲ್ಲಿ ಇದೆ. ಬೆಲೆ ಹೆಚ್ಚಳವನ್ನು ನಿಯಂತ್ರಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬಡ್ಡಿ ದರವನ್ನು ಮತ್ತೆ ಹೆಚ್ಚಿಸಬೇಕಾದ ಒತ್ತಡಕ್ಕೆ ಸಿಲುಕಲಿದೆ.

ಆಗಸ್ಟ್‌ ತಿಂಗಳಲ್ಲಿ ಶೇ 7ರಷ್ಟು ಇದ್ದ ಚಿಲ್ಲರೆ ಹಣದುಬ್ಬರ ಪ್ರಮಾಣವು ಸೆಪ್ಟೆಂಬರ್‌ನಲ್ಲಿ ಶೇ 7.4ಕ್ಕೆ ಏರಿಕೆ ಕಂಡಿದೆ. ಹಿಂದಿನ ವರ್ಷದ ಸೆಪ್ಟೆಂಬರ್‌ನಲ್ಲಿ ಇದು ಶೇ 4.35ರಷ್ಟು ಇತ್ತು.

ADVERTISEMENT

ಮಳೆ ನಿಗದಿತ ಪ್ರಮಾಣದಲ್ಲಿ ಸುರಿಯದೇ ಇದ್ದುದೇ ತರಕಾರಿ ಮತ್ತು ಹಣ್ಣುಗಳ ಬೆಲೆ ಏರಿಕೆಗೆ ಕಾರಣ ಎಂದು ತಜ್ಞರು ಹೇಳಿದ್ದಾರೆ. ‘ಹಣದುಬ್ಬರ ತುಸು ಹೆಚ್ಚಾಗಿರುವುದು ಮತ್ತು ಕೈಗಾರಿಕಾ ಉತ್ಪಾದನೆ ಕುಸಿದಿರುವುದು ಕಳವಳ ಮೂಡಿಸುವಂಥದ್ದು’ ಎಂದು ಮೋತಿಲಾಲ್ ಓಸ್ವಾಲ್‌ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞ ನಿಖಿಲ್ ಗುಪ್ತ ಹೇಳಿದ್ದಾರೆ.

ಬೆಲೆ ಏರಿಕೆ ನಿಯಂತ್ರಿಸುವ ಉದ್ದೇಶದಿಂದ ಆರ್‌ಬಿಐ, ಈ ವರ್ಷದ ಏಪ್ರಿಲ್‌ನಿಂದ ಈಚೆಗೆ ರೆಪೊ ದರವನ್ನು ಒಟ್ಟು ಶೇ 1.90ರಷ್ಟು ಹೆಚ್ಚಿಸಿದೆ.

‘ಡಿಸೆಂಬರ್‌ನಲ್ಲಿ ನಡೆಯಲಿರುವ ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆಯು ರೆಪೊ ದರವನ್ನು ಮತ್ತೆ ಹೆಚ್ಚಿಸುವುದು ಖಂಡಿತ. ಹಣದುಬ್ಬರ ಪ್ರಮಾಣವು ಅಕ್ಟೋಬರ್‌ನಲ್ಲಿ ಎಷ್ಟಿರಲಿದೆ, ಸೆಪ್ಟೆಂಬರ್ ತ್ರೈಮಾಸಿಕ ದಲ್ಲಿ ಜಿಡಿಪಿ ಬೆಳವಣಿಗೆ ದರ ಎಷ್ಟಿರಲಿದೆ ಎಂಬುದನ್ನು ಗಮನಿಸಿ ರೆಪೊ ದರ ಹೆಚ್ಚಳ ಎಷ್ಟು ಎಂಬುದು ತೀರ್ಮಾನ ವಾಗಲಿದೆ’ ಎಂದು ರೇಟಿಂಗ್ಸ್ ಸಂಸ್ಥೆ ಐಸಿಆರ್‌ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಯ್ಯರ್ ಅವರು ಹೇಳಿದ್ದಾರೆ.

ವೈಫಲ್ಯಕ್ಕೆ ವಿವರಣೆ ನೀಡಬೇಕಿದೆ

ನವದೆಹಲಿ (ಪಿಟಿಐ): ದೇಶದಲ್ಲಿ ಚಿಲ್ಲರೆ ಹಣದುಬ್ಬರ ದರವು ಸತತ ಒಂಬತ್ತು ತಿಂಗಳಿನಿಂದ ಗರಿಷ್ಠ ಮಟ್ಟಕ್ಕಿಂತ (ಶೇ 6) ಹೆಚ್ಚಿರುವ ಕಾರಣ, ಬೆಲೆ ಏರಿಕೆ ನಿಯಂತ್ರಿಸಲು ತಾನು ಸೋತಿದ್ದು ಏಕೆ ಎಂಬುದನ್ನು ಆರ್‌ಬಿಐ, ಕೇಂದ್ರ ಸರ್ಕಾರಕ್ಕೆ ಲಿಖಿತವಾಗಿ ತಿಳಿಸಬೇಕಿದೆ. ಬೆಲೆ ಏರಿಕೆ ನಿಯಂತ್ರಣಕ್ಕೆ ಯಾವ ಕ್ರಮ ಕೈಗೊಳ್ಳಲಾಗುವುದು ಎಂಬುದನ್ನೂ ಅದು ವಿವರಿಸಬೇಕಿದೆ.

ಸತತ ಮೂರು ತ್ರೈಮಾಸಿಕಗಳವರೆಗೆ (ಒಂಬತ್ತು ತಿಂಗಳು) ಹಣದುಬ್ಬರವನ್ನು ಮಿತಿಯೊಳಗೆ ಇರಿಸಲು ಸಾಧ್ಯವಾಗದಿದ್ದರೆ, ಅದಕ್ಕೆ ಕಾರಣ ಏನು ಎಂಬುದನ್ನು ಆರ್‌ಬಿಐ ಕೇಂದ್ರಕ್ಕೆ ತಿಳಿಸಬೇಕು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್ ಕಾಯ್ದೆ ಹೇಳುತ್ತದೆ.

2016ರಲ್ಲಿ ಹಣಕಾಸು ನೀತಿ ಚೌಕಟ್ಟು ಜಾರಿಗೆ ಬಂದ ನಂತರದಲ್ಲಿ ಆರ್‌ಬಿಐ ಈ ರೀತಿಯ ವರದಿ ಸಲ್ಲಿಸಬೇಕಾಗಿ ಬಂದಿ ರುವುದು ಇದೇ ಮೊದಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.